ರಾಮನಗರ: ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಡಿ ಕೆ ಶಿವಕುಮಾರ್ ಕೂಡಾ ಮೇ 8 ಕ್ಕೆ ಬಂದು ಮತಯಾಚನೆ ಮಾಡುತ್ತಾರೆ. ಅಮಿತ್ ಶಾ ಬಂದ್ರೂ ಸಂತೋಷ, ಮೋದಿ ಬಂದ್ರೂ ಸಂತೋಷ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಕನಕಪುರ ಕ್ಷೇತ್ರಕ್ಕೆ ಯಾರು ಬೇಕಾದ್ರು ಬಂದು ಪ್ರಚಾರ ಮಾಡಲಿ. ನಮಗೇನು ಭಯ ಇಲ್ಲ. ನಾನು ಕೇಳೋದಿಷ್ಟೇ, ಮೇಕೆದಾಟು ನಮ್ಮ ತಾಲೂಕಿನಲ್ಲಿದೆ. ಆಯೋಜನೆಗೆ ನೀವು ಯಾವಾಗ ಅನುಮತಿ ಕೊಡ್ತೀರಾ. ಅದರ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದರು.
ಕಾಂಗ್ರೆಸ್ ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ. ಇದು ಕಾಂಗ್ರೆಸ್ ಅನ್ನು ಸುಡುತ್ತೆ ಎಂಬ ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುರೇಶ್, ಆರ್ ಅಶೋಕ್ 40% ಸರ್ಕಾರದ ಭ್ರಷ್ಟ ಮಂತ್ರಿ. ಅವರಿಗೆ ಹೇಳಲು ಏನೂ ಇಲ್ಲ. ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದಾರೆ. ಯಾಕೆ ಬ್ಯಾನ್ ಮಾಡಿದ್ದಾರೆ ಅಂತ ಯೋಗಿ ಹೇಳಬೇಕು ಎಂದು ತಿರುಗೇಟು ನೀಡಿದರು.
ಮುಂದುವರೆದು, ಬಿಜೆಪಿ ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಅದನ್ನು ಯಾವುದಕ್ಕೋಸ್ಕರ ಬ್ಯಾನ್ ಮಾಡಿದ್ದೀರಿ. ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗಲ್ಲ ಅಂತ ಧರ್ಮದ ಹೆಸರಿನಲ್ಲಿ ಅಡ್ಡ ಬರೋದು ಒಳ್ಳೆಯದಲ್ಲ. ನಾವು ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಿಲ್ಲ. ನಾವು ಕೂಡಾ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಆದರೆ ಪ್ರಚಾರ ಮಾಡ್ಕೊಂಡು ರಾಮ, ಹನುಮನ ಪೂಜೆ ಮಾಡೋದಿಲ್ಲ. ವೋಟ್ಗಾಗಿ ಪೂಜೆ ಮಾಡೋರಿಗೆ ಜನ ಉತ್ತರ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಇಂದು ಸಂಜೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಕರೆ
ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿ ಎಲ್ ಸಂತೋಷ್ಗೆ ನಾನೇ ಎಲ್ಲಾ ರೀತಿಯ ರಕ್ಷಣೆ ಕೊಡುತ್ತೇನೆ. ಅವರೇ ಮನೆ ಮನೆಗೆ ಬಂದು ಮತ ಕೇಳಲಿ. ಅದಕ್ಕೆ ಬಿಎಸ್ಎಫ್ ನ ಅವಶ್ಯಕತೆ ಇಲ್ಲ. ನಾನು ಒಂದು ಮಾತು ಹೇಳಿದ್ರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ ಎಂದು ತಿಳಿಸಿದರು.
ಅಣ್ಣನ ಪರ ಸುರೇಶ್ ಭರ್ಜರಿ ಪ್ರಚಾರ: ಕನಕಪುರದಲ್ಲಿ ಅಣ್ಣನ (ಡಿಕೆಶಿ) ಪರವಾಗಿ ತಮ್ಮ ಪ್ರಚಾರ ನಡೆಸುತ್ತಿದ್ದು, ಸಿಎಂ ಆಗುವ ವಿಚಾರವಾಗಿ ಡಿ ಕೆ ಸುರೇಶ್ ಬೇಡಿಕೆ ಇಟ್ಟಿದ್ದಾರೆ. ಡಿಕೆಶಿ ಪರವಾಗಿ ಡಿಕೆ ಸುರೇಶ್ ಪ್ರಚಾರ ಮಾಡಿದ್ದಾರೆ. ಈ ಬಾರಿ ನಿಮ್ಮ ಮನೆ ಮಗನಿಗೆ ಅವಕಾಶ ಇದೆ. ಇಲ್ಲಿಗೆ ಬೊಮ್ಮಾಯಿ, ಅಮಿತ್ ಶಾ, ಮೋದಿ ಬರುತ್ತಾರೋ ಅಶ್ವಥ್ ಬರುತ್ತಾನೋ. ಯಾರೇ ಬಂದು ಪ್ರಚಾರ ಮಾಡಲಿ. ನೀವು 10 ಮತ್ತು 13 ರಂದು ಉತ್ತರ ನೀಡಿ ಎಂದು ಡಿ ಕೆ ಸುರೇಶ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಹನುಮಾನ್ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ, ಹಳ್ಳಿ ಹಳ್ಳಿಗಳಲ್ಲಿ ದೇವಸ್ಥಾನ: ಡಿ ಕೆ ಶಿವಕುಮಾರ್ ಘೋಷಣೆ