ರಾಮನಗರ : ರೇಷ್ಮೆ ನಗರಿಯಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ವಿಶೇಷವಾಗಿ ಈ ಬಾರಿ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಕೂಡ ಭಾಗಿಯಾಗಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಯುವ ಸಮೂಹ ಬಣ್ಣದಲ್ಲಿ ಮಿಂದೆದ್ದರು.
ಚನ್ನಪಟ್ಟಣದ ಮಂಡಿಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ರತಿ-ಮನ್ಮಥರ ಮೂರ್ತಿಯನ್ನು ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಯಿತು. ಕಾಮಣ್ಣನ ಉತ್ಸವ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ರತಿ ಮನ್ಮಥರ ಮೂರ್ತಿಗಳ ಮೆರವಣಿಗೆಯಲ್ಲಿ ಬಣ್ಣದೋಕುಳಿ ಆಡುವ ಮೂಲಕ ತಮಟೆ ನಾದಕ್ಕೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು.
ಮಂಡಿಪೇಟೆ ರಸ್ತೆಯಲ್ಲಿ ಸ್ವತಃ ಸಿಪಿವೈ ಅವರೇ ಟ್ರ್ಯಾಕ್ಟರ್ ಚಲಾಯಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರತಿ-ಮನ್ಮಥನ ಮೆರವಣಿಗೆ ಬಳಿಕ ಸಿಪಿವೈ ಬೆಂಬಲಿಗರು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಆಚರಿಸಿದರು. ಇನ್ನು ಮಾರ್ವಾಡಿ ಸಮುದಾಯ ತಮ್ಮ ಸಂಪ್ರದಾಯದಂತೆ ಚಿಕ್ಕ ಮಕ್ಕಳು ಇರುವ ಮನೆಗಳಿಗೆ ತೆರಳಿ ಬಣ್ಣದ ಹಬ್ಬವನ್ನು ಆಚರಿಸಿದರು.