ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಬಿಜೆಪಿ ಸರ್ಕಾರ ಕ್ರಮ ವಹಿಸಿದೆ. ಮೇಕೆದಾಟು ಯೋಜನೆ ಜಾರಿ ಮಾಡೇ ಮಾಡ್ತೀವಿ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ಘೋಷಿಸಿದ್ದಾರೆ.
ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಿಜೆಪಿ ಸರ್ಕಾರದ ಕನಸಿನ ಯೋಜನೆ. ಅದೇ ದಿಕ್ಕಿನಲ್ಲೂ ಕೂಡ ಕೆಲಸ ಮಾಡಿದ್ದೇವೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೂಡ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಯೋಜನೆ ಜಾರಿ ಬಗ್ಗೆ ಚರ್ಚಿಸಿದ್ದಾರೆ. ಅದೇ ರೀತಿ ಬೊಮ್ಮಾಯಿ ಅವರೂ ಕೂಡ ಶೇಖಾವತ್ ಅವರನ್ನ 5 ಬಾರಿ ಭೇಟಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಯೋಜನೆ ಕಾರ್ಯರೂಪಕ್ಕೆ ತರಲು ಸತತ ಪ್ರಯತ್ನ ಮಾಡಿದ್ದಾರೆ. ಎನ್‌ಜಿಟಿಯ ಆಕ್ಷೇಪ ತೆರವು ಮಾಡಿ ಕಾರ್ಯ ರೂಪಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಈ ಯೋಜನೆ ನೆರವೇರುವುದು ಬಿಜೆಪಿ ಸರ್ಕಾರದಲ್ಲಿ ಮಾತ್ರ. ಬೇರೆ ಇನ್ಯಾರಿಂದಲೂ ಸಾಧ್ಯವಿಲ್ಲ. ರಾಮನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗೆ ಈ ನೀರಿನಿಂದ ಉಪಯೋಗವಾಗಬೇಕು. ಇದಲ್ಲದೆ ನಾಳೆ ಸಿಎಂ ಕೂಡ ಈ ಯೋಜನೆ ಬಗ್ಗೆ ಸ್ಪಷ್ಟವಾಗಿ ಹೇಳುತ್ತಾರೆ ಎಂದರು.
ಕೋವಿಡ್, ಒಮಿಕ್ರಾನ್ ಸವಾಲಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಅವಶ್ಯಕತೆ ಇಲ್ಲ. ಸಿಎಂ ಈ ಬಗ್ಗೆ ಈಗಾಗಲೇ ಸದನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ ಈ ಕಾರ್ಯಕ್ರಮದ ಅವಶ್ಯಕತೆ ಇಲ್ಲ. ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡಿದರು.
ಡಿಕೆಶಿ ಪಾದಯಾತ್ರೆ ಪ್ರಾಕ್ಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಡದಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅವರು 100 ಕಾಲ ಬದುಕಿ ಬಾಳಬೇಕು. ಭಗವಂತ ಆರೋಗ್ಯ ಆಯಸ್ಸು ಕರುಣಿಸಲಿ ಎಂದು ದೇವರಲ್ಲಿ ಬೇಡುತ್ತೆನೆ ಎಂದು ಡಿಕೆಶಿಗೆ ಸಚಿವ ಅಶ್ವಥ್ ನಾರಾಯಣ್ ಇದೇ ವೇಳೆ ಟಾಂಗ್ ಕೊಟ್ಟರು.
ಇದನ್ನೂ ಓದಿ: ಹಾವೇರಿಯಲ್ಲಿ ಹೆಜ್ಜೇನು ದಾಳಿಗೆ ಅಂಚೆ ಇಲಾಖೆ ನಿವೃತ್ತ ನೌಕರ ಬಲಿ