ರಾಮನಗರ: ಮಂಚನಬೆಲೆ ಜಲಾಶಯದ ಸುತ್ತಮುತ್ತ ಸರ್ಕಾರಕ್ಕೆ ಸೇರಿರುವ 200 ಎಕರೆಗೂ ಹೆಚ್ಚಿನ ಸ್ಥಳವಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಲಾಡ್ಜ್ ರೆಸಾರ್ಟ್ ಪ್ರಾರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು. ರಾಮನಗರ ಜಿಲ್ಲೆಗೆ ನಿಸರ್ಗದ ಕೊಡುಗೆಯಿದ್ದು, ಪ್ರವಾಸಿ ತಾಣಗಳಲ್ಲಿ ಮೂಲ ವ್ಯವಸ್ಥೆಗಳನ್ನು ಕಲ್ಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ರಾಮನಗರ ಜಿಲ್ಲೆಗೆ ಪ್ರವಾಸಿ ಸರ್ಕ್ಯೂಟ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇಕೋ ಟೂರಿಸಂ : ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕೆ ದಕ್ಕೆ ಉಂಟು ಮಾಡದೇ ಸಾವನದುರ್ಗದಲ್ಲಿ ಮೌಂಟ್ ಕ್ಲೈಂಬಿಂಗ್, ರೋಪ್ ವೇ ಮಾಡಲು ಚಿಂತಿಸಲಾಗುತ್ತಿದೆ. ಸಾವನದುರ್ಗಕ್ಕೆ ಬರುವ ಪ್ರವಾಸಿಗರ ಸುರಕ್ಷತೆ, ಮೌಂಟ್ ಕ್ಲೈಂಬಿಂಗ್ ಮಾಡಲು ಮಾರ್ಗದರ್ಶಕರನ್ನು ನೇಮಿಸುವುದು ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಸಚಿವ ಯೋಗೇಶ್ವರ್ ತಿಳಿಸಿದರು.
ಓದಿ : ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಿಲ್ಲ, ಕೆಆರ್ಎಸ್ ಸುಸ್ಥಿತಿಯಲ್ಲಿದೆ: ಆರ್.ಅಶೋಕ್
ಮಂಚನಬೆಲೆ ಜಲಾಶಯದ ನೀರನ್ನು ಕುಡಿಯಲು ಬಳಸಲಾಗುವುದು. ಅಲ್ಲಿ ವಾಟರ್ ಸ್ಪೋರ್ಟ್ಸ್ ಮಾಡಲು ಪರಿಶೀಲನೆ ನಡೆಸಬೇಕಿದೆ. ಇನ್ನು ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ರೋಪ್ ವೇ ಮಾಡುವಂತೆ ಸ್ಥಳೀಯರು ಮನವಿ ನೀಡಿದ್ದಾರೆ. ಈ ಬಗ್ಗೆ ಕೂಡ ಚಿಂತಿಸಲಾಗುವುದು ಎಂದರು.
ಶಾಲಾ ಮಕ್ಕಳ ಪ್ರವಾಸ : ಶಾಲೆಯಲ್ಲಿ ಮಕ್ಕಳು ಐತಿಹಾಸಿಕ ಸ್ಥಳಗಳ ಬಗ್ಗೆ ಪುಸ್ತಕದಲ್ಲಿ ಮಾತ್ರ ಓದುತ್ತಾರೆ. ಅವುಗಳನ್ನು ಜೀವನ ನೇರವಾಗಿ ನೋಡುವುದೇ ಇಲ್ಲ. ಮಕ್ಕಳು ಪ್ರವಾಸ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸಲಾಗುವುದು. ಮುಖ್ಯ ಪ್ರವಾಸಿ ಸ್ಥಳಗಲ್ಲಿ ಹೆಚ್ಚಿನ ಮಕ್ಕಳು ತಂಗಲು ತಂಗುದಾಣ ನಿರ್ಮಿಸಲಾಗುವುದು. ಮಕ್ಕಳು ವಾಸ್ತವ್ಯ ಮಾಡಿ ಎರಡು ಮೂರು ದಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು ಎಂದು ಹೇಳಿದರು.