ರಾಮನಗರ : ಕಾವೇರಿಯ ಪ್ರತಿ ಹನಿಯ ಮೇಲೆ ಕನ್ನಡಿಗರ ಹಕ್ಕಿದೆ. ಇಲ್ಲಿ ಸೃಷ್ಠಿಯಾದ ಕೂಗಿಗೆ ನ್ಯಾಯ ಸಿಗುತ್ತೆ. ಕಾವೇರಿ ತಾಯಿ ನ್ಯಾಯ ಕೊಡುತ್ತಾಳೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್‌ನ ಮೇಕೆದಾಟು 2ನೇ ಹಂತದ ಪಾದಯಾತ್ರೆ ಇಂದು ಪ್ರಾರಂಭವಾಗಿದೆ. ಸಮಾರಂಭದಲ್ಲಿ ಪಾಲ್ಗೊಂಡು ರಂದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿದರು. ಉದ್ದುದ್ದ ಭಾಷಣ ಮಾಡುವ ದಿನ ಇದಲ್ಲ. ಇದು ಹೊಸ ಇತಿಹಾಸ ಬರೆಯುವ ದಿನ. ಕಾವೇರಿ ನೀರು ನಮ್ಮ ಅಧಿಕಾರ.
ರೈತರು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ನಡಿಗೆಯಲ್ಲಿ ಸಾಗಿದರೆ ಗೆಲುವಿಗಾಗಿ ಕಾವೇರಿ ತಾಯಿಯೇ ದಾರಿ ಮಾಡಿಕೊಡಲಿದ್ದಾಳೆ ಎಂದರು. ಮೇಕೆದಾಟು ಅಧಿಕಾರಕ್ಕೆ ಯಾರಾದರು ಅಡ್ಡಗಾಲಾಗಿದ್ದರೆ ಅದು ಬೆಂಗಳೂರಲ್ಲಿ ಕುಳಿತಿರುವ ಬಿಜೆಪಿ ಸರ್ಕಾರ ಕಾರಣ ಎಂದು ಕಿಡಿಕಾರಿದರು.
5 ದಿನಗಳ ಕಾಲ ಪಾದಯಾತ್ರೆ: ಮೊದಲ ಹಂತದಲ್ಲಿ ಮೇಕೆದಾಟುನಿಂದ ಆರಂಭ ಮಾಡಿದ್ದ ಪಾದಯಾತ್ರೆ ನಾಲ್ಕು ದಿನಗಳಲ್ಲಿ ರಾಮನಗರ ತಲುಪಿತ್ತು. ಕೋವಿಡ್ ಮೂರನೇ ಅಲೆ, ಜನರ ಆರೋಗ್ಯ ಹಿತದೃಷ್ಟಿ ಹಾಗೂ ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವ ನೀಡಿ ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇಂದು ಮತ್ತೆ ಆರಂಭವಾಗುತ್ತಿದೆ. ಇಂದಿನಿಂದ ಐದು ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ಎಂ ಬಿ ಪಾಟೀಲರಿಂದ 3 ಬಾರಿ ಡಿಪಿಆರ್ : ಮೇಕೆದಾಟು ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಅಂದಿನ ನೀರಾವರಿ ಸಚಿವ ಎಂ.ಬಿ ಪಾಟೀಲ್ ಅವರು 3 ಬಾರಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಮತ್ತೊಮ್ಮೆ ಡಿಪಿಎಆರ್ ಸಿದ್ಧಪಡಿಸಿ ಕೇಂದ್ರ ಜಲ ಮಂಡಳಿ ಒಪ್ಪಿಗೆ ಪಡೆಯಲು ಸಾಕಷ್ಟು ಪ್ರಯತ್ನಪಟ್ಟು ಯಶಸ್ವಿಯಾಗಿದ್ದರು.
ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ.. : ಆದರೂ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಈ ಯೋಜನೆಯ ಬಗ್ಗೆ ಒಂದು ಅನುಮತಿ ಪತ್ರವನ್ನು ಪಡೆಯಲು ಸಾಧ್ಯವಾಗಿಲ್ಲ. ರಾಜ್ಯದ ಹಾಗೂ ಕೇಂದ್ರದ ಮುಖಂಡರುಗಳು ಈ ಯೋಜನೆ ಅನುಷ್ಠಾನದ ಪ್ರತಿಪಾದನೆಗೆ ಮನಸ್ಸು ಮಾಡಿಲ್ಲ ಎಂದು ದೂರಿದರು. ಒಂದು ವೇಳೆ ತಮಿಳುನಾಡು ಸರಕಾರ ಯೋಜನೆಯ ಅನುಷ್ಠಾನದಲ್ಲಿ ತಕರಾರು ಮಾಡುತ್ತಿದ್ದರೆ ಅದು ರಾಜಕೀಯ ತಕರಾರು ಹೊರತು ಕಾನೂನಾತ್ಮಕ ಅಲ್ಲ ಎಂದು ಅವರು ಹೇಳಿದ್ದಾರೆ.
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಇದೊಂದು ಐತಿಹಾಸಿಕ ನಡಿಗೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ಅದಕ್ಕಾಗಿ ನಮ್ಮ ಪಕ್ಷದ ಸಾಧನೆ ಹಾಗೂ ಇತಿಹಾಸವನ್ನು ಮನದಲ್ಲಿಟ್ಟುಕೊಂಡು ನಾವು ಇಂದು ಹೋರಾಟ ಆರಂಭಿಸುತ್ತಿದ್ದೇವೆ ಎಂದಿದ್ದಾರೆ.
ಬಿಜೆಪಿ ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ: ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಹೋರಾಟದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀರಿಗಾಗಿ ನಡಿಗೆ ಈ ಮೇಕೆದಾಟು ಪಾದಯಾತ್ರೆಯನ್ನು ಎಂತಹ ಶುಭ ಗಳಿಗೆಯಲ್ಲಿ ಆರಂಭಿಸಿದ್ದೇವೆ ಎಂದರೆ, ಬುದ್ಧ ಬಸವನು ಮನೆ ಬಿಟ್ಟ ಗಳಿಗೆ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆ, ಭೀಮಾಭಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಗಳಿಗೆ, ಶ್ರೀಮತಿ ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಪ್ರಧಾನಮಂತ್ರಿ ಹುದ್ದೆಯನ್ನು ಆರ್ಥಿಕ ತಜ್ಞನಿಗೆ ತ್ಯಾಗ ಮಾಡಿದ ಗಳಿಗೆಯಲ್ಲಿ ಇಂದು ನಾವು ಹೋರಾಟವನ್ನು ಆರಂಭಿಸಿದ್ದೇವೆ.
ರಾಜ್ಯದ ಜನರ ಬದುಕಿಗಾಗಿ ಹೋರಾಟ : ಇದು ನಮ್ಮ ಹೋರಾಟ ಅಲ್ಲ, ರಾಜ್ಯದ ಜನರ ಬದುಕಿಗಾಗಿ ಹೋರಾಟ, ಬೆಂಗಳೂರು ಜನರ ಕುಡಿಯುವ ನೀರಿಗಾಗಿ ಹೋರಾಟ, ಕಾವೇರಿ ಜಲಾನಯನ ಪ್ರದೇಶದ ರೈತರು, ಜನರ ಹಿತಕ್ಕಾಗಿ ಹೋರಾಟ. ಅದಕ್ಕಾಗಿ ಐದು ದಿನ ಬಿಸಿಲಿದ್ದರೂ ನಾವು ಹೆಜ್ಜೆ ಹಾಕೋಣ ಎಂದು ಹೇಳಿದರು. ಈ ಹೋರಾಟವನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರೂ ಸೇರಿ ದೆಹಲಿಯ ಸಂಸತ್ ಭವನದ ಎದುರು ಧರಣಿ ಮೂಲಕ ಮಾಡಿದ್ದೆವು. ಈಗ ಅದೇ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ ಎಂದು ಪಾದಯಾತ್ರೆ ಮಾಡುತ್ತಿದ್ದೇವೆ.
ಮಾರ್ಚ್ 3ಕ್ಕೆ ಪಾಂಚಜನ್ಯ ಮೊಳಗಿಸೋಣ : ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ 2 ದಿನದಲ್ಲಿ ಪರಿಸರ ಇಲಾಖೆ ಅನುಮತಿ ಪಡೆದು ಯೋಜನೆ ಆರಂಭಿಸಬಹುದು. ನಾವು ಆಗ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಇದೇ ರೀತಿ ಬಂದು ನಿಮಗೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು. ಮಾರ್ಚ್ 3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲರೂ ಸೇರಿ ಪಾಂಚಜನ್ಯ ಮೊಳಗಿಸೋಣ ಎಂದು ಡಿಕೆಶಿ ಕರೆ ನೀಡಿದ್ದಾರೆ. ರಾಮನಗರದ ಟಿ.ಆರ್. ಮಿಲ್ ಮೈದಾನನಿಂದ ಪಾದಯಾತ್ರೆ ಆರಂಭವಾಗಿದ್ದು, ಹಲವು ಕಾಂಗ್ರೆಸ್ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಓದಿ :ರಷ್ಯಾದೊಂದಿಗೆ 'ಬೆಲಾರಸ್'ನಲ್ಲಿ ಶಾಂತಿ ಮಾತುಕತೆ ತಳ್ಳಿ ಹಾಕಿದ ಉಕ್ರೇನ್ ಅಧ್ಯಕ್ಷ