ಚನ್ನಪಟ್ಟಣ: ಇಲ್ಲಿರುವ ನಾಡದೇವತೆ ಚಾಮುಂಡೇಶ್ವರಿ ತಾಯಿಯ ಭವ್ಯ ವಿಗ್ರಹಕ್ಕೆ ಇಂದು ಮಸ್ತಕಾಭಿಷೇಕ ವೈಭವ ಜರುಗಲಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆಯಲ್ಲಿ ನೆಲೆನಿಂತ ವಿಗ್ರಹಕ್ಕೆ ವಿಶ್ವದಲ್ಲೇ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ಎಂಬ ಖ್ಯಾತಿಯಿದೆ. ಇದೇ ಮೊದಲ ಬಾರಿಗೆ ಸುಮಾರು 37,247 ಕೆ.ಜಿಯ 45 ಬಗೆಯ ದ್ರವ್ಯಗಳಿಂದ ಅಭಿಷೇಕ ನೆರವೇರಲಿದ್ದು, ಸಕಲ ವ್ಯವಸ್ಥೆಗಳು ನಡೆದಿವೆ.
ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ವೀಕ್ಷಣೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ದೇವಸ್ಥಾನದ ಧರ್ಮದರ್ಶಿ ಮಲ್ಲೇಶ್ ಗುರೂಜಿ ತಿಳಿಸಿದರು.
ವಿಶ್ವಖ್ಯಾತಿ ಗಳಿಸಿದ ಚಾಮುಂಡಿ: 35 ಸಾವಿರ ಕೆ.ಜಿ ತೂಕ, 68 ಅಡಿ ಎತ್ತರ, ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆಯಿಂದ ತಯಾರಾಗಿ 18 ಭುಜಗಳುಳ್ಳ ಸೌಮ್ಯ ರೂಪದಲ್ಲಿ ನಿಂತಿರುವ ಚಾಮುಂಡಿ ವಿಗ್ರಹ ನೋಡಲು ಅಕರ್ಷಕವಾಗಿದೆ. ಕಳೆದ 4 ವರ್ಷಗಳಿಂದ ನಡೆಯುತ್ತಿದ್ದ ವಿಗ್ರಹ ತಯಾರಿ ಕಾರ್ಯ ಪೂರ್ಣಗೊಂಡು ಈ ಹಿಂದಿನ ಭೀಮನ ಅಮಾವಾಸ್ಯೆಯ ಶುಭದಿನದಂದೇ ಲೋಕಾರ್ಪಣೆಗೊಂಡಿದೆ.
ದೇವಸ್ಥಾನದ ಧರ್ಮದರ್ಶಿ ಮಲ್ಲೇಶ್ ಚಾಮುಂಡೇಶ್ವರಿ ವಿಗ್ರಹ ಸ್ಥಾಪನೆ ಮಾಡಲು ಮುಂದಾದಾಗ ಭಕ್ತರಿಂದ ದಾನದ ರೂಪದಲ್ಲಿ ಹಣ ಹರಿದುಬಂದಿತ್ತು. ಹೀಗಾಗಿ, ದೊಡ್ಡಮಟ್ಟದಲ್ಲಿ ವಿಗ್ರಹ ಸ್ಥಾಪಿಸಿ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅವರು ಮುಂದಾದರು.
ಬೆಂಗಳೂರಿನ ನಾಯಂಡಹಳ್ಳಿಯ ಮುಸ್ಲಿಂ ಸಮುದಾಯದ 20 ಜನ ಕಾರ್ಮಿಕರು ಈ ವಿಗ್ರಹ ತಯಾರು ಮಾಡಿದ್ದಾರೆ. ಪಠಾಣ್ ಹಾಗೂ ಸಂಗಡಿಗರು ಕಳೆದ 4 ವರ್ಷಗಳಿಂದ ಶ್ರಮಿಸಿ ಸುಂದರವಾಗಿ ವಿಗ್ರಹ ತಯಾರಿಸಿದ್ದಾರೆ. ರಾಮನಗರ ಸೇರಿದಂತೆ ಬೆಂಗಳೂರು, ಮೈಸೂರು ಭಾಗದಿಂದಲೂ ಜನರು ಇಲ್ಲಿಗೆ ಆಗಮಿಸುತ್ತಾರೆ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ನಾಡದೇವಿಯ ಸನ್ನಿಧಿಗೆ ಹರಿದು ಬಂತು ದಾಖಲೆಯ ₹3.5 ಕೋಟಿ ದೇಣಿಗೆ