ರಾಮನಗರ: ಮಾಜಿ ಸಿಎಂ ಸಿದ್ದರಾಮಯ್ಯ ಗೆ 75 ವರ್ಷ ಆಗಿದೆ. ಅವರ ಅಭಿಮಾನಿಗಳು ಆಚರಣೆ ಮಾಡ್ತಿದ್ದಾರೆ. ಕೆಪಿಸಿಸಿ ಕೂಡ ಅದರಲ್ಲಿ ಭಾಗವಹಿಸುತ್ತದೆ. ಡಿ.ಕೆ.ಶಿವಕುಮಾರ್ರಿಂದ ಪ್ರತ್ಯೇಕ ಕಾರ್ಯಕ್ರಮ ವಿಚಾರವೆಲ್ಲವು ನಿಮ್ಮ ಊಹೆ ಅಷ್ಟೇ. ನಮ್ಮಲ್ಲಿ ಏನು ಇಲ್ಲ. ನಾವು ಸ್ವಾತಂತ್ರ್ಯ ಭಾರತದ 75 ನೇ ವರ್ಷದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡ್ತಿದ್ದೇವೆ. ಅದರಲ್ಲಿ 1 ಲಕ್ಷ ಜನರು ಭಾಗವಹಿಸುತ್ತಾರೆ. ನಮ್ಮ ಜಿಲ್ಲೆಯಿಂದಲೂ ಸಹ ಭಾಗವಹಿಸುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸಿದ್ದರಾಮೋತ್ಸವಕ್ಕೆ ಕಟೀಲ್ ಅವರು ಬಂದರೂ ಸ್ವಾಗತ, ಸಿದ್ದರಾಮಯ್ಯ ಕಾಂಗ್ರೆಸ್ಗೆ ಮಾತ್ರ ನಾಯಕರಲ್ಲ. ಯಾರ್ ಬೇಕಾದರೂ ಬಂದು ಶುಭಾಶಯ ಕೋರಬಹುದು. ಸಿಎಂ ಆಗಿ ಬಹಳ ಉತ್ತಮ ಸೇವೆ ಮಾಡಿದ್ದಾರೆ. ಅವರು 75 ವರ್ಷ ಬದುಕಿದ್ದಾರಲ್ಲ, ಅವರ ಸಾಧನೆ ಇದೆಯೆಲ್ಲ. ಒಬ್ಬ ಕುರಿಕಾಯೋನು ಸಿಎಂ ಆಗ್ತಾರೆ, ಬಜೆಟ್ ಮಂಡನೆ ಮಾಡ್ತಾರೆಂದರೆ ಅದಕ್ಕಿಂತಲೂ ಮುಖ್ಯ ಘಟ್ಟ ಯಾವುದಿದೆ. ಪ್ರಸ್ತುತ ದಿನಗಳಲ್ಲಿ ಈಗ 75 ವರ್ಷ ಬದುಕುವುದೇ ಕಷ್ಟ ಅಲ್ವಾ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ನಾಯಕರ ಕಿತ್ತಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಕುರ್ಚಿಗಾಗಿ ಬಿಜೆಪಿಯಲ್ಲೇ ಕಿತ್ತಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್, ಈಶ್ವರಪ್ಪ, ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ವಿಜಯೇಂದ್ರ ಎಲ್ಲರೂ ಇದ್ದಾರೆ. ಸಿಎಂ ಸೀಟ್ಗೆ ಸೂಟ್ ಹೊಲೆಸಿಕೊಂಡು ಕೂತಿದ್ದಾರೆ. ನೀವು ಮೊದಲು ಅವರನ್ನ ಇದರ ಬಗ್ಗೆ ಪ್ರಶ್ನೆ ಮಾಡಿ. ಯಾರು ಸಿಎಂ ಸೀಟ್ಗೆ ದೆಹಲಿ ಪ್ರವಾಸ ಮಾಡ್ತಾರೆ, ಒಳಗೊಳಗೆ ಕಾಲು ಎಳೆಯುತ್ತಾರೆ ನೀವೇ ವಿಚಾರಿಸಿ ಎಂದರು.
ಇದನ್ನೂ ಓದಿ:ನಿವೃತ್ತ ಸರ್ಕಾರಿ ನೌಕರರಿಗೂ ಆರೋಗ್ಯ ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
ಪ್ರವಾಹ ಎಲ್ಲ ಕಡೆ ಆಗುತ್ತಿದೆ. ಕಳೆದ ಬಾರಿ ಆದಾಗಲೂ ಸರಿಯಾಗಿ ಪರಿಹಾರ ಕೊಡಲಿಲ್ಲ. ಕೇಂದ್ರ ರಾಜ್ಯದ ಮೇಲೆ, ರಾಜ್ಯ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಪ್ರವಾಹ ಪೀಡಿತರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಸಿಎಂ ಕೂಡ ಉತ್ತರ ಕರ್ನಾಟಕ ಪ್ರವಾಸ ಮಾಡಿದ್ದರು. ಕಳೆದ ವರ್ಷ ಕೊಡಗು - ಮಡಿಕೇರಿಯಲ್ಲಿ ಸಾಕಷ್ಟು ಹಾನಿ ಆಗಿತ್ತು.
ಅವರಿಗೆ ಈವರೆಗೆ ಕೂಡ ಸರಿಯಾದ ಪರಿಹಾರ ಸಿಕ್ಕೆ ಇಲ್ಲ. ಪ್ರವಾಹದಿಂದಾಗಿ ಕಳೆದ ವರ್ಷ ಹಲವು ರಸ್ತೆಗಳು, ಶಾಲೆಗಳು ಹಾಳಾಗಿದ್ದವು. ರೈತರಿಗೆ ಬೆಳೆನಷ್ಟ ಪರಿಹಾರದಲ್ಲಿ ತಾರತಮ್ಯ ಮಾಡಿದ್ದಾರೆ. ಈ ಸರ್ಕಾರ ಶೇ 40 ರಷ್ಟು ಕಮಿಷನ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.