ರಾಮನಗರ: ಕಳೆದ ಒಂದು ವರ್ಷದಿಂದ ಬೆಟ್ಟಹಳ್ಳಿ ಕಾಲೋನಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಗ್ರಾಮಸ್ಥರೇ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ನಡೆದಿದೆ.
ಮಾಗಡಿ ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲೋನಿಯ ಸುತ್ತಮುತ್ತ ಕಳೆದೊಂದು ವರ್ಷದಿಂದ ಮೂರು ಚಿರತೆಗಳು ಗ್ರಾಮದ ಪಕ್ಕದಲ್ಲಿ ಇರುವ ಗುಡ್ಡದ ಮೇಲೆ ಪ್ರತ್ಯಕ್ಷವಾಗುತ್ತಿದ್ದವು. ಚಿರತೆಗಳ ಆರ್ಭಟಿಸುವ ಶಬ್ದ, ಹೆಜ್ಜೆ ಗುರುತುಗಳು ಗ್ರಾಮಸ್ಥರ ನಿದ್ದೆಗೆಡಿಸಿದ್ದವು. ಅಲ್ಲದೇ ರಾತ್ರಿ ವೇಳೆ ನಾಯಿ, ಮೇಕೆಗಳನ್ನ ಹೊತ್ತೊಯ್ಯುವ ಮೂಲಕ ಗ್ರಾಮಸ್ಥರಿಗೆ ಉಪಟಳ ನೀಡಿದ್ದವು.
ಕಳೆದ ವರ್ಷ ನವೆಂಬರ್ 5 ರಂದು ಬೆಟ್ಟಹಳ್ಳಿ ಕಾಲೋನಿ ನಿವಾಸಿ ಕೆಂಚಯ್ಯ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಅವರನ್ನು ಚಿರತೆ ತಿಂದು ಹಾಕಿದ್ದು, ಅರ್ಧ ಕಾಲನ್ನು ಹಾಗೆಯೇ ಗುಡ್ಡದ ಮೇಲೆ ಉಳಿಸಿತ್ತು. ಈ ಘಟನೆಯಿಂದಾಗಿ ಬೆಚ್ಚಿಬಿದ್ದಿದ್ದ ಗ್ರಾಮಸ್ಥರು, ಕೆಂಚಯ್ಯನ ಕುಟುಂಬಸ್ಥರಿಗೆ ಸೂಕ್ತವಾದ ಪರಿಹಾರ ನೀಡುವಂತೆ ಮತ್ತು ಗ್ರಾಮದ ಬಳಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳನ್ನ ಹಿಡಿಯುವಂತೆ ಬೆಟ್ಟಹಳ್ಳಿ ಶಿವಗಂಗೆ ಮುಖ್ಯರಸ್ತೆಯಲ್ಲಿ ಇಡೀ ರಾತ್ರಿ ನವೆಂಬರ್ 5 ರಂದು ರಸ್ತೆಗಿಳಿದು ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ ಅರಣ್ಯ ಇಲಾಖೆ ಮತ್ತು ಸಂಬಂಧ ಪಟ್ಟ ಜನಪ್ರತಿನಿಧಿಗಳು ಇದುವರೆಗೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲವೆಂದು ಕೆಂಚಯ್ಯನ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮನನೊಂದ ಗ್ರಾಮಸ್ಥರು ಸ್ವತಃ ತಾವೇ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದರು. ಅದರಂತೆ ಒಂದು ಚಿರತೆ ಬೋನಿಗೆ ಬಿದ್ದಿದೆ.
ಉಳಿದ ಚಿರತೆಗಳನ್ನು ಹಿಡಿಯಲು ಮನವಿ:
ಬೆಟ್ಟಹಳ್ಳಿ ಕಾಲನಿಯಲ್ಲಿ ಒಟ್ಟು ಮೂರು ಚಿರತೆಗಳು ಗ್ರಾಮಸ್ಥರಿಗೆ ಕಾಣಿಸುತ್ತಿದ್ದು, ಒಂದೇ ಚಿರತೆ ಬೋನಿಗೆ ಬಿದ್ದಿದೆ. ಆದ್ದರಿಂದ ಉಳಿದ 2 ಚಿರತೆಗಳನ್ನು ಸಹ ಹಿಡಿಯಲು ಬೋನು ಇಡುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.