ರಾಮನಗರ : ದುಷ್ಕರ್ಮಿಗಳು ದೇವಾಲಯದ ಹುಂಡಿ ಕಳವು ಮಾಡಿ ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಕೋಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಬೀಗ ಒಡೆದು ಹುಂಡಿಯಲ್ಲಿದ್ದ ಹಣ ದೋಚಿ ನಂತರ ಪಕ್ಕದ ಜಮೀನಿನಲ್ಲಿ ಹುಂಡಿಯನ್ನು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಎರಡು ವರ್ಷದ ಹಿಂದೆ ಇದೇ ದೇವಾಲಯದಲ್ಲಿ ವಿಗ್ರಹ ಕಳ್ಳತನ ಮಾಡಲಾಗಿತ್ತು. ಪದೇಪದೆ ಕಳವು ನಡೆಯುತ್ತಿದ್ದು, ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿ ಇರುವವರೇ ಈ ರೀತಿ ಕೃತ್ಯ ಎಸಗಿದ್ದಾರೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇದೇ ವೇಳೆ ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.