ರಾಮನಗರ: ಎಂಟೆಕ್ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಅವರನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಲೇಜಿನ ಪ್ರಾಜೆಕ್ಟ್ ವರ್ಕ್ ಮುಗಿಸಿ ವಾಪಸಾಗುತ್ತಿದ್ದ ವಿದ್ಯಾರ್ಥಿಗಳನ್ನ ಕಿಡ್ನಾಪ್ ಮಾಡಿದ್ದ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಈ ಇಬ್ಬರು ಕಾಲೇಜಿನ ಪ್ರಾಜೆಕ್ಟ್ ಕೆಲಸಕ್ಕಾಗಿ ಮೈಸೂರಿಗೆ ಹೋಗಿದ್ದರು. ಸಂಜೆಯಾಗುತ್ತಿದ್ದಂತೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಫೋನ್ನಲ್ಲಿ ಮಾತನಾಡುವ ಸಲುವಾಗಿ ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರದಲ್ಲಿ ಬೈಕ್ ನಿಲ್ಲಿಸಿದ್ದರು. ಇದನ್ನೇ ಗಮನಿಸಿದ್ದ ಮೂವರು ಕಿಡಿಗೇಡಿಗಳ ತಂಡ ವಿದ್ಯಾರ್ಥಿನಿಯನ್ನ ಅಡ್ಡಗಟ್ಟಿದ್ದರು. ನೀವಿಬ್ರೂ ಬೇರೆ-ಬೇರೆ ಧರ್ಮದವರು, ನೀವಿಬ್ಬರೂ ಲವ್ ಮಾಡ್ತಿದ್ದಿರಾ. ಈ ವಿಚಾರವನ್ನ ನಿಮ್ಮ ಗುರು ಹಿರಿಯರಿಗೆ ತಿಳಿಸುತ್ತೇನೆ. ನೀನು ಬೈಕ್ ಹತ್ತಿ ಬಾ, ನಮ್ಮ ಸಂಘದ ಕಚೇರಿಗೆ ಕರೆದೊಯ್ದು ಅಲ್ಲಿ ತೀರ್ಮಾನ ಮಾಡೋಣ ಎಂದು ಬಲವಂತವಾಗಿ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದರು.
ಬಳಿಕ ರಾಮನಗರ ಹೊರವಲಯದಲ್ಲಿರುವ ಎಟಿಎಂ ಬಳಿ ನಿಲ್ಲಿಸಿ ನಮಗೆ 5 ಸಾವಿರ ಹಣ ಕೊಟ್ರೆ ನಿಮ್ಮನ್ನ ಬಿಟ್ಟು ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ತಕ್ಷಣ ಆ ವಿದ್ಯಾರ್ಥಿನಿ ತನ್ನ ಸಹೋದರನಿಗೆ ವಿಷಯ ಮುಟ್ಟಿಸಿ ಹಣ ಹಾಕಲು ಹೇಳಿದ್ದಳು. ಹಣ ಡ್ರಾ ಮಾಡುವ ನೆಪದಲ್ಲಿ ವಿದ್ಯಾರ್ಥಿನಿ ತನ್ನ ಅಣ್ಣನಿಗೆ ತಾನಿರುವ ಮೊಬೈಲ್ ಲೋಕೆಷನ್ ಹಾಗೂ ವಿಚಾರ ಹೇಳಿದ್ದಳು. ಆಗ ಆಕೆಯ ಅಣ್ಣ ಈ ಕುರಿತು ರಾಮನಗರ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಕಂಟ್ರೋಲ್ ರೂಂಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ರಾಮನಗರ ಎಸ್ಪಿ ಡಾ. ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳಾದ ಮಥೀನ್(29) ಹಾಗೂ ಸುಹೇಲ್(30) ರಾಮನಗರದಲ್ಲಿ ರೇಡಿಯಂ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದವರು. ಇದೇ ಮೊದಲ ಬಾರಿಗೆ ಹಣ ಮಾಡಕೊಳ್ಳಲು ವಿದ್ಯಾರ್ಥಿಗಳನ್ನ ಅಡ್ಡಗಟ್ಟಿ ಕಿಡ್ನಾಪ್ ಮಾಡಿದ್ರು. ಆದ್ರೆ ಪೊಲೀಸರ ಅತಿಥಿಯಾಗಿದ್ದಾರೆ. ಇನ್ನು, ಕಿಡ್ನಾಪ್ ಮಾಡುವ ವೇಳೆ ವಿದ್ಯಾರ್ಥಿಗಳು ಬಂದಿದ್ದ ಬೈಕ್ಅನ್ನು ಸಹ ಕಿತ್ತುಕೊಂಡು ಹೋಗಿದ್ದರು. ಆದ್ರೆ, ಖಚಿತ ಮಾಹಿತಿ ಪಡೆದ ಐಜೂರು ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.