ರಾಮನಗರ: ಬಿಜೆಪಿ ಜತೆ ಮೈತ್ರಿ ಸಂಬಂಧಿಸಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಉಂಟಾಗಿದ್ದ ಕೆಲವು ಗೊಂದಲಗಳನ್ನು ಜೆಡಿಎಸ್ ವರಿಷ್ಠ ನಾಯಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿವಾರಿಸಿದರು. ಪಕ್ಷದ ಹಿತಕ್ಕಾಗಿ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ಅವರ ನಿರ್ಧಾರಕ್ಕೆ ನಾವು ಬದ್ಧ ಎಂದು ಎಲ್ಲಾ ಮುಖಂಡರು ಒಕ್ಕೊರಲ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಬಿಜೆಪಿಯೊಂದಿಗೆ ಮೈತ್ರಿ ವಿಚಾರದಲ್ಲಿ ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ, ಇಡುವ ಅಗತ್ಯವೂ ಇಲ್ಲ ಎಂದರು.
ವರಿಷ್ಠರು ಕೈಗೊಂಡ ನಿರ್ಧಾರ ದೂರದೃಷ್ಟಿಯಿಂದ ಕೂಡಿದೆ: ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ಗುರು ಪಾಟೀಲ್, ರಾಜಾ ವೆಂಕಟಪ್ಪ ನಾಯಕ ಮುಂತಾದವರು ಪಕ್ಷ ಮತ್ತು ವರಿಷ್ಠರು ಕೈಗೊಂಡ ನಿರ್ಧಾರ ದೂರದೃಷ್ಟಿಯಿಂದ ಕೂಡಿದೆ. ಪಕ್ಷದ ಹಿತ ಅದರಲ್ಲಿ ಅಡಗಿದೆ. ನಾವೆಲ್ಲರೂ ಈ ನಿರ್ಧಾರಕ್ಕೆ ಬದ್ಧ. ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.
ಪಕ್ಷದ ಹಿತಕ್ಕಾಗಿ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತೇವೆ. ಪಕ್ಷ ಉಳಿದರೆ ನಾವು ಉಳಿಯುತ್ತವೆ. ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ಅಲ್ಲದೆ ತಮ್ಮ ಭಾಷಣದ ನಡುವೆ ಮುಖಂಡರಿಂದ ಪಕ್ಷ ನಿಷ್ಠೆ ಬಗ್ಗೆ ಪ್ರಮಾಣ ಮಾಡಿಸಲಾಯಿತು.
ಅಲ್ಪಸಂಖ್ಯಾತರಿಗೆ ಜೆಡಿಎಸ್ ಅನ್ಯಾಯ ಮಾಡಿಲ್ಲ-ಬಿ.ಎಂ.ಫಾರೂಕ್: ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮಾತನಾಡಿ, ಅಲ್ಪಸಂಖ್ಯಾತರಾದ ನಾವು ನಮ್ಮ ಆಚಾರ ವಿಚಾರ, ಆಹಾರ ಪದ್ಧತಿ ಇತ್ಯಾದಿಗಳಿಂದ ಕೆಲವು ಸಮಸ್ಯೆ ಎದುರಿಸುತ್ತಿದ್ದೇವೆ. ಆ ವಿಷಯದಲ್ಲಿ ಪಕ್ಷ ನಮ್ಮ ಜತೆ ನಿಂತಿದೆ. ಯಾರೇ ಪಕ್ಷ ಬಿಟ್ಟರೂ ನಾನು ಪಕ್ಷ ಬಿಡಲ್ಲ. ಇಪ್ಪತ್ತು ತಿಂಗಳ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಕಾಲದಲ್ಲಿ ಅಲ್ಪಸಂಖ್ಯಾತರಿಗೆ ಏನಾದರೂ ತೊಂದರೆ ಆಯಿತಾ? ಕುಮಾರಸ್ವಾಮಿ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟರು. ಎಲ್ಲೂ ಕೂಡ ನಮಗೆ ಜೆಡಿಎಸ್ ಅಥವಾ ಕುಮಾರಸ್ವಾಮಿ ಅವರಿಂದ ಅನ್ಯಾಯ ಆಗಿಲ್ಲ. ನಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭರವಸೆ ನೀಡಿದ್ದಾರೆ ಫಾರೂಕ್ ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಮುಸ್ಲಿಮರ ನಡುವಿನ ಬಾಂಧವ್ಯ ಬಹಳ ಚೆನ್ನಾಗಿದೆ. ಅದನ್ನು ಕೆಡಿಸುವ ಶಕ್ತಿಗಳ ಬಗ್ಗೆ ಮುಸ್ಲಿಮರು ಆಲೋಚನೆ ಮಾಡುವುದು ಬೇಡ. ಮುಸ್ಲಿಮರಿಗೆ ಪಕ್ಷ ಸಾಕಷ್ಟು ನೀಡಿದೆ ಎಂದರು.
ಬಿಜೆಪಿ ಜತೆಗಿನ ಮೈತ್ರಿ ನನ್ನ ಸ್ವಾರ್ಥಕ್ಕೆ ಅಲ್ಲ, ನಾಡಿನ ಹಿತಕ್ಕಾಗಿ- ಕುಮಾರಸ್ವಾಮಿ: ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಈ ಮೈತ್ರಿ ಪರಿಹಾರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಪಡೆಯದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಈ ಮೈತ್ರಿ ನನ್ನ ಸ್ವಾರ್ಥಕ್ಕೆ ಅಲ್ಲ, ನಾಡಿನ ಹಿತಕ್ಕಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾನೂನಿನ ವ್ಯಾಪ್ತಿಯೊಳಗೆ ಈ ಸಮಸ್ಯೆ ಪರಿಹಾರ ಪಡೆಯುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ನಮ್ಮ ನೀರು ಉಳಿಸೋದಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಕಾಂಗ್ರೆಸ್‌ನವರ ರೀತಿಯಲ್ಲಿ ನಾನು ಸುಳ್ಳು ಹೇಳುವುದಿಲ್ಲ. ದೇವೇಗೌಡರ ಮಾರ್ಗದರ್ಶನದಲ್ಲಿ ಈ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸ್ಪಷ್ಪಪಡಿಸಿದರು.
ಹಿಂದೆ ನಾನು ರೂಪಿಸಿದ್ದ ಜಲಧಾರೆಯಲ್ಲೂ ಅತ್ಯುತ್ತಮ ಪರಿಹಾರ ಇತ್ತು. ಜನರು ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ಪಕ್ಷವನ್ನು ನಂಬಿ ಮತ ಹಾಕಿದರು. ಆದರೆ, ರಾಜ್ಯದ ಜನರ ಕಣ್ಣೀರು ಹಾಕಿಸುತ್ತಿದ್ದಾರೆ. ಹೀಗಾಗಿ ನಾನು ಕೆಲವು ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕಾಯಿತು. ಈ ಮೈತ್ರಿಯಿಂದ ಅಧಿಕಾರಕ್ಕೆ ಬರುವುದು ನನ್ನ ಉದ್ದೇಶ ಅಲ್ಲ. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಗುರಿ. ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲ ಸಮಸ್ಯೆ, ಯೋಜನೆಗಳಿಗೆ ಪರಿಹಾರ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂಓದಿ: ಕುಮಾರಸ್ವಾಮಿ ಹೇಳಿಕೆಯಿಂದ ಮುಸ್ಲಿಂ ಸಮಾಜಕ್ಕೆ ನೋವಾಗಿದೆ: ಜೆಡಿಎಸ್ ಮುಖಂಡ ನಾಸಿರ್ ಹುಸೇನ್