ರಾಮನಗರ : ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಿಮ್ಮ ಮನೆ ಮಗನನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಭೆ ಚುನಾವಣೆಯಲ್ಲಿ ಹಿನ್ನೆಲೆ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಆದ್ದರಿಂದ ಚನ್ನಪಟ್ಟಣ ಕ್ಷೇತ್ರಕ್ಕೆ ಒಂದು ದಿನ ಮಾತ್ರ ಬಂದು ನಿಮ್ಮನ್ನು ಭೇಟಿಯಾಗಬಹುದು. ಮುಂಬರುವ ಚುನಾವಣೆಯಲ್ಲಿ 120 ಸೀಟು ಗೆಲ್ಲಲು ರಾಜ್ಯಾದ್ಯಂತ ಪ್ರವಾಸ ಮಾಡಬೇಕಿದೆ. ನಿಮ್ಮ ಮನೆ ಮಗನನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮಗೆ ಸೇರಿದ್ದು. ರಾಜ್ಯದಲ್ಲಿ ಜನತಾದಳದ ಸ್ವತಂತ್ರ ಸರ್ಕಾರ ತರಲು ಹೊರಟಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಜನರಲ್ಲಿ ಮನವಿ ಮಾಡಿದರು.
ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಮ್ಮ ಪಕ್ಷದ ಬಗ್ಗೆ ಹಾಗೂ ಕಾರ್ಯಕರ್ತರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿಯವರು ನೋಟು ಎಣಿಕೆ ಮಾಡಲು ತಮ್ಮ ಮನೆಗಳಲ್ಲಿ 3-4ಕ್ಕೂ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಅವರ ಮನೆ ಮೇಲೆ ಐಟಿ, ಇಡಿ, ಸಿಬಿಐ ದಾಳಿ ಮಾಡಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ದಾಳಿಗಳು ಶುರುವಾಗುತ್ತವೆ. ಚನ್ನಪಟ್ಟಣದ ಗುತ್ತಿಗೆದಾರರ ಮೇಲೂ ದಾಳಿ ಆಗಬಹುದು. ಆದರೆ ನಾನಿರುವವರೆಗೂ ನೀವು ಹೆದರುವ ಅವಶ್ಯಕತೆ ಇಲ್ಲ ಎಂದು ಹೆಚ್ಡಿಕೆ ಅಭಯ ನೀಡಿದರು.
ಇದನ್ನೂ ಓದಿ : ಪಂಚರತ್ನ ರಥಯಾತ್ರೆಯಿಂದ ರಾಷ್ಟ್ರೀಯ ಪಕ್ಷಗಳಿಗೆ ನಡುಕ: ಕುಮಾರಸ್ವಾಮಿ