ರಾಮನಗರ/ಬೆಂಗಳೂರು: ಶೀಘ್ರದಲ್ಲಿಯೇ ಜನತಾ ಜಲಧಾರೆಯನ್ನು ಆರಂಭಿಸುವ ದಿನಾಂಕವನ್ನು ಪ್ರಕಟ ಮಾಡುವುದಾಗಿ ತಿಳಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಈ ಯಾತ್ರೆಯ ಪೂರ್ವ ಸಿದ್ಧತೆಗಳೆಲ್ಲ ಬಹುತೇಕ ಮುಗಿದಿವೆ ಎಂದು ಹೇಳಿದರು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಸಭೆ ನಡೆಸಲಾಯಿತು. ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜೆಡಿಎಸ್ ಕೈಗೊಳ್ಳಲಿರುವ 'ಜನತಾ ಜಲಧಾರೆ ಗಂಗಾ ರಥಯಾತ್ರೆ'ಯ ಪೂರ್ವಭಾವಿ ಸರಣಿ ಸಭೆಗಳಲ್ಲಿ ಇದು ಕೊನೆಯ ಸಭೆಯಾಗಿತ್ತು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು ಹಾಗೂ ಹಿರಿಯ ಮುಖಂಡರ ಜತೆ ಮಾತುಕತೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಎಲ್ಲರಿಗೂ ಕೆಲ ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದರು.
ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಮಾಡಿರುವ ಜನಪರ ಕೆಲಸಗಳನ್ನು ಜನರಿಗೆ ತಿಳಿಸಬೇಕು. ಮನೆ ಮನೆಗೂ ಜಲಧಾರೆಯ ಮಹತ್ವದ ಬಗ್ಗೆ ವಿವರಿಸಬೇಕು. ಕೃಷಿಕರು, ಯುವಕರು, ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ತಮ್ಮ ಪಕ್ಷದ ಎಲ್ಲ ಮುಖಂಡರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಬಿಜೆಪಿಯವರು ಈಗೇನ್ ಬೇಕೋ ಅದನ್ನೇ ಮಾಡಿಕೊಳ್ಳಲಿ: ಮುಂದೆ ನಮ್ಮ ಸರ್ಕಾರ ಬಂದಾಗ ಎಲ್ಲ ರಿವರ್ಸ್ ಎಂದ ಡಿಕೆಶಿ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯಲ್ಲಿ ಒಟ್ಟು 14 ದಿನಗಳ ಗಂಗಾ ರಥಯಾತ್ರೆ 246 ಕಿ.ಮೀ ದೂರವನ್ನು ಕ್ರಮಿಸಲಿದೆ. ಮೇಕೆದಾಟು, ಹಾರೋಬೆಲೆ, ಮುತ್ತತ್ತಿ, ಇಗ್ಗಲೂರು, ಕಣ್ವ, ವೈ.ಜಿ. ಗುಡ್ಡ, ತಿಪ್ಪಗೊಂಡನಹಳ್ಳಿ ಜಲಾಶಯಗಳಲ್ಲಿ ಪವಿತ್ರ ಜಲ ಸಂಗ್ರಹ ಮಾಡಲಾಗುವುದು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 14 ದಿನಗಳ ಯಾತ್ರೆಯಲ್ಲಿ ಒಟ್ಟು 596 ಕಿ.ಮೀ. ದೂರವನ್ನು ಕ್ರಮಿಸಲಾಗುವುದು. ಈ ಮಾರ್ಗದಲ್ಲಿ ಮೂಡಿಗೆರೆ, ಕಳಸ, ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ತುಂಗಾ ಮತ್ತು ಭದ್ರಾ ಜಲಾಶಯಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು.
ಅಲ್ಲದೆ, ಜಲ ಸಂಗ್ರಹದ ವಿಧಾನ, ಕಲಶ ಪೂಜೆ, ಮೆರವಣಿಗೆ, ಕಲಾತಂಡಗಳು, ಮಂಗಳ ವಾದ್ಯಗಳ ಮೇಳ ಸೇರಿದಂತೆ ಮುಖಂಡರು, ಕಾರ್ಯಕರ್ತರು ವಹಿಸಿಕೊಳ್ಳಬೇಕಾದ ಜವಾಬ್ದಾರಿಗಳ ಬಗ್ಗೆ ಕುಮಾರಸ್ವಾಮಿ ಅವರು ನಿರ್ದಿಷ್ಟ ಸೂಚನೆಗಳನ್ನು ನೀಡಿದರು.