ರಾಮನಗರ: ಟೌನ್ಶಿಪ್ ಹೆಸರಲ್ಲಿ ಅಕ್ರಮದ ವಾಸನೆ ಬರುತ್ತಿದ್ದು, ಕೂಡಲೇ ಸ್ವಾಧೀನ ಕಾರ್ಯ ನಿಲ್ಲಿಸಿ. ರೆಡ್ ಝೋನ್ನಲ್ಲಿರುವ ಬಿಡದಿ ಹೊಸೂರು ಭಾಗದ ರೈತರ ಹತ್ತು ಸಾವಿರ ಎಕರೆ ಸಂಪೂರ್ಣ ಖರೀದಿಸಿ ಅಥವಾ ಎಲ್ಲೋ ಝೋನ್ ಮಾಡಿಕೊಡಿ. ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಆಗ್ರಹಿಸಿದರು.
ಬಿಡದಿಯ ಹೊಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಟೌನ್ಶಿಪ್ಗೆ ಚಾಲನೆ ನೀಡಿದ್ದು, ಜನರ ಜಮೀನು ಸ್ವಾಧೀನ ಆಗ್ತಿದೆ. ಆದ್ರೆ ಎಲ್ಲರ ಜಮೀನು ಅಂತಂತ್ರಕ್ಕೆ ಸಿಲುಕುವ ಮೂಲಕ ಯಾವುದೇ ಪರಾಭಾರೆ ಸೇರಿದಂತೆ ಏನನ್ನೂ ಮಾಡಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2004ರಿಂದ ಇಲ್ಲಿಯವರೆವಿಗೂ ಜಮೀನು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ರೈತರ ಬಗ್ಗೆ ಕ್ರಮ ವಹಿಸದಿದ್ದರೆ ಸಿಎಂ ಮನೆ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ರು.
ಮೊದಲ ಬಾರಿಗೆ ಹೆಚ್ಡಿಕೆ ಮುಖ್ಯಮಂತ್ರಿಯಾಗಿದ್ದಾಗ ಟೌನ್ಶಿಪ್ ಮಾಡುವ ಘೋಷಣೆ ಮಾಡಿದ್ರು. ಅದರಿಂದ ರೈತರು ಬದುಕು ಕೂಡ ಹಸನಾಗುತ್ತೆ ಎನ್ನುವಂತಾಗಿತ್ತು. ಆದರೆ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಡಿಕೆ ಎರಡು ಬಾರಿ ಮುಖ್ಯಮಂತ್ರಿ ಆದಾಗಲೂ ಯಾವುದೇ ಕ್ರಮ ವಹಿಸಿಲ್ಲ. ಈ ಭಾಗದ ರೈತರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರೈತರ ಸಮಸ್ಯೆ ಬಗ್ಗೆ ಅವರು ಕೂಡಾ ಗಮನ ಹರಿಸಿರಲಿಲ್ಲ ಎಂದರು.
ಕಿಕ್ ಬ್ಯಾಕ್ ಆರೋಪ:
ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಕಿಕ್ ಬ್ಯಾಕ್ ಆರೋಪ ಇದ್ದು, ಮುಂದಿನ ದಿನಗಳಲ್ಲಿ ಯಾರು ಎಷ್ಟು ಪಡೆದಿದ್ದಾರೆ ಎಂಬುದನ್ನ ಕಲೆಹಾಕಿ ಮಾಧ್ಯಮದ ಮುಂದೆ ತಿಳಿಸುತ್ತೇವೆ ಎಂದರು.
ಹಾಲಿ ಶಾಸಕರು ಸ್ಥಳೀಯರಾಗಿದ್ದು, ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ನಿಪುಣರೂ ಕೂಡ. ಆದರೆ ಅವರು ಯಾಕೆ ತಲೆಕೆಡಿಸಿಕೊಂಡಿಲ್ಲ ಅಂತಾ ಗೊತ್ತಿಲ್ಲ. ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಶಾಸಕ ಎ.ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
30 ಗ್ರಾಮಗಳ ರೈತರು ಅತಂತ್ರ:
30 ಗ್ರಾಮಗಳ ಹತ್ತು ಸಾವಿರ ರೈತ ಕುಟುಂಬಗಳು ಟೌನ್ಶಿಪ್ ನೆಪದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಕೆಲವೇ ಕೆಲವು ರೈತರ ಜಮೀನು ಖರೀದಿಸಿದ ಕೆಐಎಡಿಬಿ ಎಲ್ಲರ ಜಮೀನು ಸ್ವಾಧೀನ ಪಡಿಸಿಕೊಳ್ಳಲಿ. ಇಲ್ಲದಿದ್ದರೆ ಝೋನ್ ರಿಲೀಸ್ ಮಾಡಲಿ. ನಂತರ ಅವರಿಗೆ ಬೇಕಾದ ಜಮೀನು ಖರೀದಿಸಲಿ. ಇಲ್ಲವಾದ್ರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ಒಟ್ಟು ಟೌನ್ಶಿಪ್ನ 10000 ಎಕರೆ ಜಮೀನು ಪೈಕಿ 800 ಎಕರೆ ಮಾತ್ರ ಸ್ವಾಧೀನಕ್ಕೆ ಮುಂದಾಗಿದ್ದು, ಉಳಿದ ರೈತರಿಗೆ ವಂಚನೆಯಾಗುತ್ತಿದೆ, ಇದು ಸರಿಯಲ್ಲ. ಮಾಡೋದಾದ್ರೆ ಉಳಿದ ಎಲ್ಲಾ ರೈತರ ಜಮೀನು ಎಲ್ಲೋ ಝೋನ್ ಮಾಡಿ. ಇಲ್ಲಿದಿದ್ದರೆ ಎಲ್ಲಾ ಹತ್ತು ಸಾವಿರ ಎಕರೆ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳಿ ಎಂದು ಒತ್ತಾಯಿಸಿದರು.
ಹೆಚ್ಡಿಕೆ ಕನಸು ಅಕ್ರಮದತ್ತ:
ಬಿಡದಿ ಟೌನ್ಶಿಪ್ ಅನ್ನೋದು ಹೆಚ್ಡಿಕೆ ಕನಸಿನ ಕೂಸು. ಅವರ ಪಕ್ಷದ ಶಾಸಕರ ವ್ಯಾಪ್ತಿಯಲ್ಲಿದ್ದು, ಅವರೇ ಉತ್ತರ ಕೊಡಬೇಕು. ಅವರು ಕೂಡಲೇ ಕಾರ್ಯೋನ್ಮುಖರಾಗಿ ರೈತರಿಗೆ ನ್ಯಾಯ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ನಾವು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಹೋರಾಟದ ಹಂತ ತಲುಪುತ್ತೇವೆ. ಈಗಾಗಲೇ ನಮ್ಮ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ ಗಮನಕ್ಕೂ ತರಲಾಗಿದೆ ಎಂದರು.