ರಾಮನಗರ: ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ.
20ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಅಲ್ಲದೆ ರೇಷ್ಮೇ ಸಾಕಾಣಿಕೆ ಮನೆಯ ಮೇಲ್ಛಾವಣಿಯ ಶೀಟ್ಗಳು ಗಾಳಿಗೆ ಹಾರಿ ಹೋದ ಪರಿಣಾಮ ಸುಮಾರು 150 ಚಂದ್ರಿಕೆಯಷ್ಟು ರೇಷ್ಮೆ ಗೂಡು ಸಂಪೂರ್ಣ ನಾಶವಾಗಿದೆ.
ಚನ್ನಪಟ್ಟಣ ತಾಲೂಕಿನ ಸೀಬನಹಳ್ಳಿ ಗ್ರಾಮದಲ್ಲಿ ಕೃಷ್ಣ ಎಂಬುವರಿಗೆ ಸೇರಿದ ರೇಷ್ಮೆ ಸಾಕಾಣಿಕಾ ಮನೆ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಇದರಿಂದಾಗಿ ಸುಮಾರು 150 ಚಂದ್ರಿಕೆಯಷ್ಟು ಗೂಡು ವರುಣನ ಅಬ್ಬರಕ್ಕೆ ನಾಶವಾಗಿದೆ.

ನಿನ್ನೆ ಸಂಜೆಯಿಂದ ಭಾರೀ ಗಾಳಿ ಹಾಗೂ ಧಾರಾಕಾರ ಮಳೆಗೆ ಸೀಬನಹಳ್ಳುಯ ಮತ್ತೋರ್ವ ರೈತ ಮಹಿಳೆ ನಾಗಮಣಿ ಎಂಬುವವರ ವಾಸದ ಮನೆ ಶೀಟು ಗಾಳಿಗೆ ಹಾರಿ ಹೋಗಿದ್ದು, ಮನೆಯಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ಗ್ರಾಮದ ಅಕ್ಕಪಕ್ಕದಲ್ಲಿ ಸುಮಾರು 20ಕ್ಕೂ ಹೆಚ್ಚು ತೆಂಗಿನಮರಗಳು ನೆಲಕ್ಕುರುಳಿವೆ. ಅಲ್ಲದೆ ಮೂರ್ನಾಲ್ಕು ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಸ್ಥಳೀಯ ವೆಂಕಟೇಶ್ ತಿಳಿಸಿದ್ದಾರೆ.