ರಾಮನಗರ: ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು ಕಾವೇರಿ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹಾಗಾಗಿ ನದಿಪಾತ್ರದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕಾವೇರಿ ನದಿಯಲ್ಲಿ ಯಾವುದೇ ಸಮಯದಲ್ಲಿ ಪ್ರವಾಹದಿಂದ ನದಿ ತುಂಬಿ ಹರಿಯುವ ಸಂಭವವಿರುತ್ತದೆ. ನದಿಗೆ ಹೊಂದಿಕೊಂಡಂತೆ ಇರುವ ಕಬಿನಿ, ಹಾರಂಗಿ ಮತ್ತು ಕೆ.ಆರ್.ಎಸ್ ಜಲಾಶಯಗಳಿಂದ ಸಹ ನೀರನ್ನು ಹೊರಗೆ ಬಿಡುವುದರಿಂದ, ಕನಕಪುರ ತಾಲೂಕು ವ್ಯಾಪ್ತಿಯ ಕಾವೇರಿ ನದಿ ದಡದಲ್ಲಿ ಬರುವ ವಸತಿ ಗ್ರಾಮಗಳಾದ ಬೊಮ್ಮಸಂದ್ರ, ಕುಪ್ಪೆದೊಡ್ಡಿ ಸಂಗಮ ಗ್ರಾಮಸ್ಥರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ಹಾಗೂ ನದಿಯಲ್ಲಿ ಯಾರೂ ಕೂಡ ಇಳಿಯಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.