ರಾಮನಗರ: ಜಿಲ್ಲೆಯಾದ್ಯಂತ ನಿನ್ನೆ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಮರಗಳು ಧರೆಗುರುಳಿದ್ದು, ಚನ್ನಪಟ್ಟಣದ ವಿವಿಧ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆಗಿಡಗಳು ನೆಲಕಚ್ಚಿವೆ.
ಗೋವಿಂದಹಳ್ಳಿ, ಕೂರಣಗೆರೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಮಳೆಗೆ ಗ್ರಾಮದ ಹಲವು ರೈತರ ಬಾಳೆ ಹಾಗೂ ತೆಂಗಿನ ಮರಗಳು ನೆಲಕ್ಕುರುಳಿ ನಾಶವಾಗಿವೆ. ಬೆಳೆ ಕಳೆದುಕೊಂಡ ರೈತರು ಆಕ್ರೋಶಗೊಂಡು ರಸ್ತೆಯಲ್ಲಿ ಬಾಳೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.
ಗೋವಿಂದಳ್ಳಿಯ ರೈತ ಕೂರಣಗೆರೆ ಕುಮಾರ್ ಎಂಬಾತ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದಾರೆ. ಅವರ ಆರೋಗ್ಯದ ಚಿಕಿತ್ಸೆಗೆ ಬಾಳೆ ಫಸಲು ಸಹಾಯಕವಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಇದೀಗ ಬಾಳೆ ಗಿಡಗಳೆಲ್ಲವೂ ನೆಲಕಚ್ಚಿದ್ದರಿಂದ ಆತಂಕದ ಜೊತೆಗೆ ಅವರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಸುದರ್ಶನ್, ರೈತರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಸೂಕ್ತ ಪರಿಹಾರ ನೀಡದಿದ್ದರೆ ಕುಟುಂಬದವೆರೆಲ್ಲಾ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೈ ಮುಗಿದು ಎಚ್ಚರಿಕೆ ನೀಡಿದ ರೈತ ಕುಮಾರ್, ತಾವು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಗ್ಗೆ ತಹಶೀಲ್ದಾರ್ ಗೆ ವಿವರಿಸಿದರು.
ತಹಶೀಲ್ದಾರ್ ಸುದರ್ಶನ್ ಪ್ರತಿಕ್ರಿಯಿಸಿ, ಇದು ಪ್ರಕೃತಿ ವಿಕೋಪದಿಂದ ಆಗಿರುವಂತಹದ್ದು. ಆದರೂ ರೈತರ ಬೆಳೆ ನಷ್ಟವಾಗಿದೆ, ರೈತರ ಸಂಕಷ್ಟ ನನಗೆ ಅರ್ಥವಾಗಲಿದೆ, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ರೈತರ ಮನವೊಲಿಸಿದ್ದಾರೆ.