ರಾಮನಗರ: ಋಣ ಮುಕ್ತ ಕಾಯ್ದೆ ವಿಚಾರದಲ್ಲಿ ಇಂದಿನ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು, ಈ ಸರ್ಕಾರದ ಜವಬ್ದಾರಿಯು ಕೂಡ ಇದೆ ಅಂತಾ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಹತ್ವಕಾಂಕ್ಷಿ ಯೋಜನೆ ಋಣ ಮುಕ್ತ ಕಾಯ್ದೆ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನ ಎಚ್ಚರಿಸಿದ್ರು.
ಇಂದು ತಮ್ಮ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಭೇಟಿ ನೀಡಿ ತಾಲೂಕಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಋಣ ಮುಕ್ತ ಖಾಯ್ದೆ ಜಾರಿಗೆ ತಂದಿದ್ದು ಯಾರು ಖಾಸಗಿ ವ್ಯಕ್ತಿಗಳಿಂದ ಹಣವನ್ನು ಬಡ್ಡಿಗೆ ಸಾಲ ಪಡೆದು, ಆ ಹಣಕ್ಕೆ ಅಸಲಿಗಿಂತ ಬಡ್ಡಿಯನ್ನ ಜಾಸ್ತಿ ಕಟ್ಟಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಈ ಕಾರಣದಿಂದ ಬಡವರು ಸಮಸ್ಯೆಯಿಂದ ಬಳಲಬಾರದು ಎಂಬ ಕಾರಣಕ್ಕಾಗಿ ಈ ಯೋಜನೆಯನ್ನ ನಾನು ಜಾರಿಗೆ ತಂದಿದ್ದೇನೆ. ಈ ಯೋಜನೆಯ ಬಗ್ಗೆ ಇವತ್ತಿನ ಸರ್ಕಾರ ಹೆಚ್ಚು ಗಮನ ಹರಿಸಬೇಕೆಂದಿದ್ದಾರೆ.
ಸಿಪಿವೈಗೆ ಪರೋಕ್ಷ ಟಾಂಗ್:
ಸಭೆಯಲ್ಲಿ ಮಾತನಾಡುತ್ತಾ ಕೆಲವರು ಈಗ ಹಣದ ವಸೂಲಿ ದಂಧೆಗೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಅಂತಹವರಿಗೆ ಮಣೆ ಹಾಕಬೇಡಿ. ನನಗೆ ಗೊತ್ತಿದೆ ಈ ಸರ್ಕಾರದ ಆಯಸ್ಸು ಕೇವಲ ತಿಂಗಳು ಮಾತ್ರ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಿ.ಪಿ.ಯೋಗೇಶ್ವರ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದೇ ವೇಳೆ ಪೋಲೀಸ್ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಅಕ್ರಮ ಮರಳು ಸಾಗಾಣಿಕೆಗೆ ನಾನೆಂದೂ ಪ್ರೋತ್ಸಾಹ ನೀಡಿಲ್ಲ. ಪೊಲೀಸ್ ಇಲಾಖೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ ಎಂದ ಅವರು ನಾನು ಜವಾನಿಂದ ಹಿಡಿದು ಎಲ್ಲರನ್ನೂ ಬಹುವಚನದಿಂದಲೇ ಮಾತನಾಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ ನಾನು ದಬ್ಬಾಳಿಕೆ ನಡೆಸೊಲ್ಲ ಎಂದ ಅವರು ಕ್ಷೇತ್ರದ ಜನತೆ ಕೆಲಸಕಾರ್ಯಗಳಿಗೆ ಯಾವುದೇ ಅಧಿಕಾರಿ ತೊಂದರೆ ಮಾಡಬೇಡಿ ಎಂದು ಎಚ್ಚರಿಸಿದರು.