ರಾಮನಗರ : ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಬಗ್ಗೆ ಪಕ್ಷದ ಹಾಲಿ ಶಾಸಕರು, ಕಳೆದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಅಭ್ಯರ್ಥಿಗಳು ಹಾಗೂ ಮುಂದಿನ ಚುನಾವಣೆಯ ಅಭ್ಯರ್ಥಿಗಳ ಜತೆ ಮಾಜಿ ಸಿಎಂ ಹೆಚ್ಡಿಕೆ ಮಹತ್ವದ ಸಭೆ ನಡೆಸಿದರು.
ರಾಮನಗರ ಜಿಲ್ಲೆ ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಿಷನ್ 123 ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡುವ ಮೂಲಕ 2023ರ ಚುನಾವಣೆಗೆ ರೋಡ್ ಮ್ಯಾಪ್ ಪ್ರಸ್ತುತ ಪಡಿಸಿದರು.
ಸ್ವತಃ ಕಾಲೇಜು ಪ್ರಾಧ್ಯಾಪಕರಂತೆ ಸಂಘಟನಾ ಕಾರ್ಯಾಗಾರದ ಎರಡನೇ ದಿನ ಪಾಠಕ್ಕೆ ನಿಂತ ಹೆಚ್ಡಿಕೆ, ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ತಮ್ಮ ಕನಸುಗಳನ್ನು ಬಿಚ್ಚಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶಕ್ತಿ ಬಗ್ಗೆ ಖುದ್ದು ಕುಮಾರಸ್ವಾಮಿ ಅವರಿಂದಲೇ ಪ್ರಾತ್ಯಕ್ಷಿಕೆ ಆಗಿದ್ದು, ಎಲ್ಲಾ ಶಾಸಕರು, ಪ್ರತಿನಿಧಿಗಳಿಗೆ ಹೊಸ ಅನುಭವ ನೀಡಿತು.
ಅವರು ಮಂಡಿಸಿದ ವಿಷಯಗಳಿಂದ ಬಹಳ ಪ್ರಭಾವಿತರಾದರು. ದೇಶದಲ್ಲಿ ಪ್ರಾದೇಶಿಕ ರಾಜಕಾರಣಕ್ಕೆ ಹೆಚ್ಚು ಬಲವಿದೆ. ಅದರ ಮೂಲ ಬೇರುಗಳು ನಮ್ಮ ರಾಜ್ಯದಲ್ಲೇ ಇವೆ. ಜೆಡಿಎಸ್ ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ಪೋಷಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಎಲ್ಲಾ ಮುಖಂಡರಿಗೆ ಉದಾಹರಣೆಗಳ ಮುಖೇನ ವಿವರಿಸಿದರು.
ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ - ಹೆಚ್ಡಿಕೆ
ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಸಂಸ್ಕೃತಿ ಇರೋದಿಲ್ಲ. ಕನ್ನಡಿಗರ ಕೈಯ್ಯಲ್ಲಿಯೇ ಅಧಿಕಾರ ಇರುತ್ತದೆ. ಪ್ರತಿಯೊಂದಕ್ಕೂ ದಿಲ್ಲಿ ಕಡೆ ನೋಡಬೇಕಾಗಿಲ್ಲ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಐತಿಹಾಸಿಕ ನಿರ್ಧಾರಗಳನ್ನು ಹೈಕಮಾಂಡ್ ಹಂಗಿಲ್ಲದೆ ತೆಗೆದುಕೊಳ್ಳಬಹುದು ಎಂದರು.
ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡೋಣ. ಕಾಲಮಿತಿಯಲ್ಲಿ ಅವುಗಳ ಪರಿಹಾರಕ್ಕೆ ಭರವಸೆ ಕೊಡೋಣ. ನೀರಾವರಿ ಯೋಜನೆಗಳು ಮತ್ತು ರೈತ ಪರ ಯೋಜನೆಗಳು ನಮ್ಮ ಪಕ್ಷದ ಮೊದಲ ಆದ್ಯತೆ ಎಂದರಲ್ಲದೆ, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಜನರ ಬಳಿಗೆ ಹೋಗಬೇಕು. ಪಕ್ಷದ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು.
ರಾಜ್ಯದ ಐದು ನೀರಾವರಿ ಯೋಜನೆಗಳಿಗೆ ಜೀವ ತುಂಬುವುದು ನಮ್ಮ ಮಹತ್ವದ ನಿಲುವು. ಮೇಕೆದಾಟು, ಯುಕೆಪಿ, ಮಹದಾಯಿ, ಎತ್ತಿನಹೊಳೆ ಯೋಜನೆಗಳ ಕ್ಷಿಪ್ರ ಕಾರ್ಯಗತದ ಭರವಸೆಯೊಂದಿಗೆ ಮುಂದಕ್ಕೆ ಹೋಗೋಣ.
ಎತ್ತಿನಹೊಳೆ ಹೆಸರು ಹೇಳಿಕೊಂಡು ಮೊದಲು 8000 ಕೋಟಿ ರೂ. DPR ಮಾಡಲಾಯಿತು. ಆಮೇಲೆ 13000 ಕೋಟಿಗೆ ಮರು DPR ಮಾಡಲಾಯಿತು. ಈಗ ಪುನಃ 24000 ಕೋಟಿ ರೂ.ಗಳಿಗೆ DPR ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಜೆಡಿಎಸ್ ವಿಷನ್- ಮಿಷನ್ 2023
2023ಕ್ಕೆ ಸ್ವಂತ ಬಲದಲ್ಲಿ 123 ಸೀಟು ಪಡೆಯುವುದು ಪಕ್ಷದ ದೊಡ್ಡ ಗುರಿ. ಈ ನಿಟ್ಟಿನಲ್ಲಿ ಪಂಚರತ್ನ ಯೋಜನೆ ಜಾರಿ ಮಾಡೋದು ನಮ್ಮ ಗುರಿ. ಆರೋಗ್ಯ, ಶಿಕ್ಷಣ, ಕೃಷಿ, ವಸತಿ, ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಯೋಜನೆ ಮೂಲಕ ರಾಜ್ಯದ ಆಮೂಲಾಗ್ರ ಅಭಿವೃದ್ಧಿಗೆ ಕಾಣಿಕೆ ನೀಡುವುದು ಪಕ್ಷದ ಉದ್ದೇಶ. ತಳಮಟ್ಟದಿಂದ ಅಭಿವೃದ್ಧಿ ಸಾಧನೆ ಮಾಡುವುದು ನಮ್ಮ ಪರಿಕಲ್ಪನೆ ಆಗಿದ್ದು, ಅದಕ್ಕೆ ಬೇಕಾದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.