ರಾಮನಗರ: ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ರೀತಿಯ ಸಂಶಯಗಳು, ಪ್ರೇರಣೆಗಳಿವೆ. ಸೂಕ್ತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಿದೆ. ಕಾಣದ ಕೈಗಳ ಚಿತಾವಣೆ ಇರೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೃತವ್ಯಕ್ತಿ 4 ಕೋಟಿ ರೂಪಾಯಿ ಕೆಲಸವನ್ನು ವರ್ಕ್ ಆರ್ಡರ್ ಹಾಗೂ ಎಸ್ಟಿಮೇಟ್ ಪಡೆಯದೆ ಕಾಮಗಾರಿ ಮಾಡಿದ್ದಾನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸಂತೋಷ್ ಸಾವಿನಲ್ಲಿ ಹಲವು ಅನುಮಾನಗಳು ಕೂಡ ಇವೆ. ಸಂತೋಷ್ ಜತೆಗೆ ಇಬ್ಬರು ಸ್ನೇಹಿತರು ಹೋಗಿದ್ದಾರೆ. ಸಂತೋಷ್ ಮಾತ್ರ ಒಂದು ಕೊಠಡಿಗೆ ಹೋಗಿದ್ದಾನೆ. ಉಳಿದ ಇಬ್ಬರು ಒಂದು ಕೊಠಡಿಗೆ ಏಕೆ ಹೋಗಿದ್ರು?. ಅದರಲ್ಲೂ ಉಡುಪಿಗೆ ಯಾಕೆ ಹೋದ್ರು?. ಸರ್ಕಾರ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ಹಾಕಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕಿದೆ ಎಂದು ಆಗ್ರಹ ಮಾಡಿದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ
ಕಾಂಗ್ರೆಸ್ ನಾಯಕರು ಮೃತ ಸಂತೋಷ್ ಮನೆಗೆ ತೆರಳಿ ಸಾಂತ್ವನ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಕೊಲೆಯಾದಾಗ ಬಿಜೆಪಿ ದಂಡೇ ಹೋಗಿತ್ತು. ಇದಕ್ಕೆ ನಾವು ಏನ್ ಕಡಿಮೆ ಅಂತಾ ಈ ಸಾವಿನ ರಾಜಕಾರಣ ಮಾಡಲಿಕ್ಕೆ ಕಾಂಗ್ರೆಸ್ ನಾಯಕರ ದಂಡು ಹೋಗಿದೆ ಎಂದು ಲೇವಡಿ ಮಾಡಿದರು.