ರಾಮನಗರ : ಆರ್ಎಸ್ಎಸ್ ಪ್ರಚಾರಕರೇ ಹೇಳಿರುವ ಮಾತನ್ನು ನಾನು ಹೇಳಿದ್ದೇನೆ. ದಾಖಲೆ ಇಲ್ಲದೆ ನಾನು ಏನೂ ಮಾತನಾಡಲ್ಲ. ಬೇಕಿದ್ದರೇ ಬಿಜೆಪಿಗರು ಮತ್ತು ಆರ್ಎಸ್ಎಸ್ ನಾಯಕರು ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಇಂದು ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆ ಆರ್ಎಸ್ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಸ್ತವತೆಯ ಆಧಾರದಲ್ಲಿ ಆ ಮಾತನ್ನ ಹೇಳಿದ್ದೇನೆ. ಆರ್ಎಸ್ಎಸ್ ಪ್ರಚಾರಕರೆ ಹೇಳಿರುವ ಮಾತುಗಳನ್ನ ಪ್ರಸ್ತಾಪ ಮಾಡಿದ್ದೇನೆ. ಸಾರ್ವಜನಿಕವಾಗಿ ಚರ್ಚೆಗೆ ನಾನು ಸಿದ್ಧ. ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರು ಬರಲಿ ಎಂದು ಸವಾಲೆಸೆದರು.
ಭಾರತ ಪಾಕಿಸ್ತಾನ ಆಗುವುದನ್ನ ಆರ್ಎಸ್ಎಸ್ ತಪ್ಪಿಸ್ತಾ?: ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಬಂದಾಗ ಆರ್ಎಸ್ಎಸ್ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗುತಿತ್ತು ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಹುಟ್ಟಿದ್ರಾ? ನಾನು ಹುಟ್ಟಿರಲಿಲ್ಲ. ಯಾರ ಯಾರ ಕೊಡುಗೆ ಏನ್ ಏನ್ ಇದೆ ಅಂತಾ ಈಶ್ವರಪ್ಪ ಅವರಿಗೆ ಏನ್ ಗೊತ್ತು. ಆರ್ಎಸ್ಎಸ್ನವರು ಬಂದು ಭಾರತ ಪಾಕಿಸ್ತಾನ ಆಗುವುದನ್ನ ತಪ್ಪಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಇದೇನಾ ಆರ್ಎಸ್ಎಸ್ ಹೇಳಿಕೊಟ್ಟಿದ್ದು?: ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನ ಸುಟ್ಟಿದ್ದಾರೆ. ದೇವೇಗೌಡ್ರು 10 ತಿಂಗಳು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ಯಾವುದಾದರೂ ನಡೆದಿತ್ತಾ ಎನ್ನುವುದಕ್ಕೆ ಪುರಾವೆ ಕೊಡಿ. ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು ಹಾಗೂ ಶಿಕ್ಷಕರನ್ನ, ನಾಗರಿಕರನ್ನ ಭಯೋತ್ಪಾದಕರು ಗುಂಡಿಕ್ಕಿದ್ದಾರೆ. ಹೀಗೇನಾ ಆರ್ಎಸ್ಎಸ್ ನಿಮಗೆ ಸರ್ಕಾರ ನಡೆಸುವುದು ಹೇಗೆಂದು ಹೇಳಿಕೊಟ್ಟಿರೋದು ಎಂದರು.
ಕಾಶ್ಮೀರವನ್ನು ಹಾಳು ಮಾಡುತ್ತಿದ್ದಾರೆ: ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ, ಆಧಾರ ಇಟ್ಟಿಕೊಂಡು ಮಾತನಾಡುತ್ತೇನೆ. ಆರ್ಎಸ್ಎಸ್ ಹಾಗೂ ಬಿಜೆಪಿ ಸೇರಿ ಕಾಶ್ಮೀರವನ್ನ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ರು.
ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ : ಉಪ ಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣವಿದೆ. ಸಿಂದಗಿಯಲ್ಲಿ ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ಸೂಚನೆ ಇದೆ. ಹಾನಗಲ್ನಲ್ಲಿ ಪೈಪೋಟಿ ನೀಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ರು.
ಕಾಂಗ್ರೆಸ್ನಂತೆ ಹೀನಾಯ ರಾಜಕೀಯ ಮಾಡಲ್ಲ : ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೇನೆ. ಎಲ್ಲಿ ನಮ್ಮ ಪಕ್ಷ ಸ್ಟ್ರಾಂಗ್ ಇದೆ ಅಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಓಪನ್ನಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷದ ಹಾಗೇ ಹೀನಾಯ ರಾಜಕೀಯ ಮಾಡಲ್ಲ. ಸಿದ್ದರಾಮಯ್ಯ ಅವರ ಹಾಗೆ ಕುಲಗೆಟ್ಟ ರಾಜಕೀಯ ನಾನು ಮಾಡಲ್ಲವೆಂದು ಸಿದ್ದರಾಮಯ್ಯರಿಗೆ ಕುಟುಕಿದರು.