ರಾಮನಗರ: ಪಿಎಸ್ಐ(PSI) ಹುದ್ದೆ ಕೊಡಿಸುವುದಾಗಿ ಹೇಳಿ 14 ಲಕ್ಷ ರೂ. ವಂಚಿಸಿರುವ ಪ್ರಕರಣದಡಿ (ramanagara fraud case) ಮೂವರ ವಿರುದ್ಧ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ(channapatna pura police station) ದೂರು ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಬಳಿಯ ರಾಮೋಹಳ್ಳಿಯ ಗೋವಿಂದರಾಜು ಮತ್ತು ದಿಲೀಪ್ ಎಂಬುವವರು ಮೂವರ ವಿರುದ್ಧ, ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹೇಳಿ 14 ಲಕ್ಷ ರೂ. ಹಣ ಪಡೆದು ನಮಗೆ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಚನ್ನಪಟ್ಟಣ ನಗರದ ಗಿರೀಶ್, ವಂದಾರಗುಪ್ಪೆ ಪೊಲೀಸ್ ತರಬೇತಿ ಶಾಲೆಯ ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ವಿರುದ್ಧ ದೂರು ದಾಖಲಾಗಿದೆ.
ಈ ಮೂರು ಮಂದಿ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ 36 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಾವು ಹಂತ ಹಂತವಾಗಿ ಹಣ ನೀಡುವುದಾಗಿ ಹೇಳಿ 14 ಲಕ್ಷ ಹಣ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಕಳೆದ 3 ವರ್ಷದಲ್ಲಿ ಆತ್ಮಹತ್ಯೆಗೆ ಶರಣಾದರು 309 ಮಂದಿ...!
ನಾವು 1 ಲಕ್ಷ, 2 ಲಕ್ಷ, 5 ಲಕ್ಷ ರೂ. ಹೀಗೆ ಹಂತ ಹಂತವಾಗಿ ಗಿರೀಶ್, ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ಗೆ 14 ಲಕ್ಷ ರೂ ನೀಡಿ, ಒಂದು ವರ್ಷ ಕಳೆದರೂ ನಮ್ಮ ಕೆಲಸ ಮಾಡಿ ಕೊಡಲಿಲ್ಲ. ಕೆಲಸ ಮಾಡಿಕೊಡದಿದ್ದಕ್ಕೆ ಹಣ ಮರುಪಾವತಿ ಮಾಡಲು ತಿಳಿಸಿದ್ದು, ಅವರು ಚೆಕ್ ನೀಡಿ ವಂಚಿಸಿದ್ದಾರೆ.
ಇದಲ್ಲದೇ ಈ ಬಗ್ಗೆ ನಾವು ಪ್ರಶ್ನಿಸಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ. ನೀವು ಪೊಲೀಸರಿಗೆ ದೂರು ನೀಡಿದ್ರೂ ಏನೂ ಮಾಡಿಕೊಳ್ಳಲು ಆಗೋಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.