ರಾಮನಗರ : ಜೋಡೆತ್ತು ಎಂದು ಹೇಳಿದ ಮಾತು ಕೇಳಿ ನಾನು ನಂಬಿ ಮೋಸ ಹೋಗಿದ್ದೇನೆ. 2018 ಸರ್ಕಾರ ಹೋಗಿದ್ದು ಡಿ ಕೆ ಶಿವಕುಮಾರ್ ಅವರಿಂದ, ನನ್ನಿಂದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೇಗೆ ಬಿತ್ತು, ಯಾರು ತೆಗೆದರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಸರ್ಕಾರ ಬೀಳಬೇಕಾದ್ರೆ ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ?. ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ ಅಷ್ಟೇ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ? ಎಂದು ಟಾಂಗ್ ಕೊಟ್ಟರು.
ಇದಲ್ಲದೆ ಸರ್ಕಾರ ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಕನಕಪುರ ಜನರಿಗೆ ನನ್ನಿಂದ ಎಳ್ಳಷ್ಟೂ ಅನ್ಯಾಯ ಆಗಿಲ್ಲ. ಆಗಿರುವ ಅನ್ಯಾಯ ಸರಿ ಮಾಡುವ ಹೊಣೆ ನನ್ನದು. ಹಾಗೆಯೇ ಕೋಟೆ ಕಟ್ಟಿ ಮೆರೆದೋರೆಲ್ಲ ಏನೇನೋ ಆಗಿ ಹೋದರು. ಆ ಮಾತು ಇವರಿಗೂ ಅನ್ವಯ ಆಗುತ್ತದೆ ಎಂದು ಹೆಚ್ಡಿಕೆ ಹೇಳಿದ್ರು.
ಇದಲ್ಲದೆ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ 2 ರಿಂದ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕು. ಅದಕ್ಕೆ ನೀವೆಲ್ಲರೂ ಶ್ರಮ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಮೈತ್ರಿಕೂಟದ ಮೂಲಕ ಇಡೀ ರಾಜ್ಯಕ್ಕೆ, ದೇಶಕ್ಕೆ ನಾವು ಒಳ್ಳೆಯ ಸಂದೇಶ ಕೊಡಬೇಕು. ನಾವೆಲ್ಲರೂ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಿದೆ. ಇದಲ್ಲದೆ ಯಾರೇ ಮೈತ್ರಿಕೂಟದ ಅಭ್ಯರ್ಥಿ ಆದರೂ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಕುಮಾರಸ್ವಾಮಿ ಕರೆ ನೀಡಿದರು.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಯಾರು ಮೋಸ ಮಾಡಿದ್ರು, ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೋಸ ಮಾಡಿದ್ದರು. ಅಲ್ಲಿ ಮೋಸ ಮಾಡಿದ ಹಾಗೆ ಇಲ್ಲಿಯೂ ನಾವು ಮಾಡಿದ್ದಿದ್ದರೆ ಕಥೆ ಅಂದೇ ಮುಗಿಯುತ್ತಿತ್ತು ಎಂದು ಸಂಸದ ಡಿ ಕೆ ಸುರೇಶ್ ವಿರುದ್ಧ ಹೆಚ್ಡಿಕೆ ಗರಂ ಆದರು. ನಾವು ಮೈತ್ರಿ ಧರ್ಮ ಪಾಲಿಸಿದೆವು. ನಮಗೆ ಕೇಡು ಬಗೆದರು. ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಜರಿದರು.
ಇದಲ್ಲದೆ 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತವಾಗಿದ್ದು, ಸರ್ಕಾರದ ಪತನದ ಬಗ್ಗೆ ಹೆಚ್ಡಿಕೆ ಹೊಸ ಬಾಂಬ್ ಸಿಡಿಸಿದ್ದಾರೆ. ಆ ಚುನಾವಣೆಗೆ ಆ ವ್ಯಕ್ತಿ ಅಭ್ಯರ್ಥಿ ಆಗುವುದೇ ಅನುಮಾನ ಎಂದು ಡಿ ಕೆ ಶಿವಕುಮಾರ್ ಮುಂದಿನ ರಾಜಕೀಯದ ಬಗ್ಗೆ ಹೆಚ್ಡಿಕೆ ಭವಿಷ್ಯ ನುಡಿದರು.
ಹಾಗೆಯೇ ಜೀವನದಲ್ಲಿ ಡಿಕೆಶಿ ಜೊತೆಗೆ ಎಂದೂ ರಾಜಿ ಆಗಲ್ಲ. ಒಮ್ಮೆ ಅವರ ಜತೆ ಸರ್ಕಾರ ನಡೆಸಿ ನಾನು ಈಗಲೂ ನೋವು ಅನುಭವಿಸ್ತಾ ಇದ್ದೇನೆ. ಒಂದು ಬಾರಿ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರ್ಮನೆಂಟಾಗಿ ಹೋದರೂ ಅಚ್ಚರಿ ಇಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್ಗೆ ಜೈಲಿಗೆ ಓಡುವ ಕಾಲ ಹತ್ತಿರವಿದೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಹೆಚ್ಡಿಕೆ-ಬಿಎಸ್ ವೈ ಮೈತ್ರಿ ಪ್ರತಿಭಟನೆಗೆ ಶುಭವಾಗಲಿ .. ಅದೇ ರೀತಿ ಒಗ್ಗಟ್ಟಾಗಿ ಕೇಂದ್ರದ ಮುಂದೆ ಕೇಳಲಿ: ಡಿಸಿಎಂ ಡಿ ಕೆ ಶಿವಕುಮಾರ್