ರಾಮನಗರ: ಆರು ತಿಂಗಳು ಸಮಯಾವಕಾಶ ಕೊಡಿ ನಾನು ತಗೆದುಕೊಳ್ಳುವ ನಿರ್ಧಾರದಿಂದ ಜನರು ವಿರೋಧ ಪಕ್ಷಗಳಿಗೆ ಬಡಿಗೆಯಲ್ಲಿ ಹೊಡೆಯುತ್ತಾರೆ ಅಂತಾ ಯಡಿಯೂರಪ್ಪ ಮೈಸೂರಿನಲ್ಲಿ ಹೇಳಿದ್ದಾರೆ. ಅದೆಂತಹ ಪವಾಡ ರೂಪದ ಯೋಜನೆ ರೂಪಿಸುತ್ತಾರಾ ಎಂಬುದನ್ನ ನಾವೂ ಕಾದುನೋಡ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಆರು ತಿಂಗಳಲ್ಲಿ ವಿರೋಧ ಪಕ್ಷಗಳಿಗೆ ಬಡಿಗೆಯಲ್ಲಿ ಹೊಡೆಯುವಂತಹ ಯಾವ ಕಾರ್ಯ ಮಾಡ್ತಾರೆ. ಮುಂದಿನ ತಿಂಗಳ 5ರ ಬಜೆಟ್ನಲ್ಲಿ ನೋಡೋಣ. ಯಡಿಯೂರಪ್ಪ ಏನೆಲ್ಲ ಅಭಿವೃದ್ಧಿ ಯೋಜನೆಗಳನ್ನ ಕೊಡುತ್ತಾರೆ ಎಂಬುದು ಆ ಬಳಿಕವೇ ಗೊತ್ತಾಗುತ್ತೆ ಎಂದು ಲೇವಡಿ ಮಾಡಿದರು.
ಇದೇ ವೇಳೆ, ಅಮೆರಿಕ ಅಧ್ಯಕ್ಷರು ಬಂದಿರುವುದಕ್ಕೆ ಖರ್ಚು ಮಾಡಿರುವ ಹಣ ಯಾರದ್ದು, ಅವರಿಗೆ ಖರ್ಚು ಮಾಡಿರುವ ಹಣದಲ್ಲಿ 10 ಹಳ್ಳಿಗಳನ್ನ ನಿರ್ಮಾಣ ಮಾಡಬಹುದಿತ್ತು. ಗುಜರಾತ್ನಲ್ಲೇ ಸ್ಲಂ ಕಾಣಬಾರದು ಅಂತಾ ಗೋಡೆ ಕಟ್ಟುವ ಬದಲು, ಅದೇ ಹಣದಲ್ಲಿ ಅಲ್ಲಿನ ಸ್ಲಂಗಳನ್ನು ಅಭಿವೃದ್ಧಿ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದರು.
ಕಡತ ವಿಲೇವಾರಿ ಮಾಡದ ಸರ್ಕಾರ: ರಾಜ್ಯದ ಹಲವು ಇಲಾಖೆಗಳ ಒಂದು ಲಕ್ಷ ಕಡತಗಳು ವಿಲೇವಾರಿ ಆಗಿಲ್ಲ ಅಂತಾ ಸದನದಲ್ಲಿ ಸುದೀರ್ಘ ಚರ್ಚೆಯಾಗಿದೆ. ಸರಕಾರದ ಮಂತ್ರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಕಡತಗಳ ವಿಲೇವಾರಿ ಮಾಡಬೇಕು. ಆದರೆ ಭ್ರಷ್ಟ ವ್ಯವಸ್ಥೆಗೆ ಉತ್ತೇಜನ ನೀಡಲು ಸರಕಾರ ಕಡತಗಳನ್ನ ವಿಲೇವಾರಿ ಮಾಡಿಲ್ವಾ ಎಂದು ಯಡಿಯೂರಪ್ಪಗೆ ಎಚ್ಡಿಕೆ ಪ್ರಶ್ನೆ ಮಾಡಿದ್ರು.
ಸರ್ಕಾರ ಅಸ್ಥಿರ ಮಾಡೋಕೆ ಹೋಗಲ್ಲ: ಯಾವುದೇ ಸರಕಾರವನ್ನ ಅಸ್ಥಿರ ಮಾಡಲ್ಲ ಅಂತಾ ವಿಧಾನಸಭೆಯಲ್ಲೆ ತಿಳಿಸಿದ್ದೇನೆ. ರಾಜ್ಯದ ಹಿನ್ನೆಡೆಗೆ ನಾನು ಕಾರಣನಾಗುವುದಿಲ್ಲಾ. ನನಗೆ ಅದರ ಅವಶ್ಯಕತೆಯೂ ಇಲ್ಲ. ಉಮೇಶ್ ಕತ್ತಿ ನಮ್ಮ ಸ್ನೇಹಿತರು ಅವರ ಭೇಟಿಗೆ ಅಷ್ಟು ಮಹತ್ವ ಕೊಡಬೇಕಾಗಿಲ್ಲ, ರಾಜ್ಯದ ಅಭಿವೃದ್ಧಿ ಮುಖ್ಯ, ಸರಕಾರವನ್ನ ಕೆಡವಿ, ನನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗಾಗಿ ಸರ್ಕಾರ ಕೆಡವಲು ಪಾಲುದಾರನಾಗುವುದಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.