ರಾಮನಗರ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ಯಾಕೇಜ್ಗಳು ಬೋಗಸ್. ದೇಶ ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ದುಡ್ಡು ಇರಬೇಕು. ಆದರೆ, ಸರ್ಕಾರಗಳು ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಗಡಿ ತಾಲೂಕಿನ ಕುದೂರು ಹೋಬಳಿಯಲ್ಲಿ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿ, ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಬಡ ಜನರನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಿತ್ತು. ಆದರೆ, ಎರಡೂ ಸರ್ಕಾರಗಳು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿವೆ. ಈಗ ಪರಿಸ್ಥಿತಿಯನ್ನು ಅರಿತು ಆರ್ಥಿಕ ಚೇತರಿಕೆಗೋಸ್ಕರ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ ಅಷ್ಟೇ. ಸರ್ಕಾರಕ್ಕೆ ನಾವೇ ಮೂರ್ನಾಲ್ಕು ಭಾರಿ ಹೋಗಿ ಮನವಿ ಮಾಡಿದ್ದೇವೆ. ಆದರೆ ಅವರು ಬೇಜವಾಬ್ದಾರಿಯಿಂದ ನಡೆದುಕೊಂಡರು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಯಡವಟ್ಟಿನಿಂದಾಗಿ ದೇಶಕ್ಕೆ ಕೊರೊನಾ ವಕ್ಕರಿಸಿದೆಯೇ ಹೊರತು ಯಾವುದೇ ತಬ್ಲಿಘಿಗಳಿಂದಲ್ಲಾ. ಬಿಜೆಪಿಯವರು ಮಾತ್ರ ತಬ್ಲಿಘಿಗಿಗಳಿಂದ ಕೊರೊನಾ ಹರಡಿದೆ ಎಂದು ದೇಶವ್ಯಾಪಿ ಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.
ಮಾಜಿ ಶಾಸಕಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ನೂರಾರು ಜನರು ಆಹಾರ ಸಾಮಗ್ರಿಗಳ ಕಿಟ್ ಪಡೆದುಕೊಂಡರು.