ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಆನೆಯೊಂದು ತುಳಿದು ಸಾಯಿಸಿರುವ ಘಟನೆ ಕನಕಪುರ ತಾಲ್ಲೂಕಿನ ಹೊನ್ನಿಗನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮರಿಗೌಡ (72) ಮೃತಪಟ್ಟವರು.
ರೈತ ಮಧ್ಯಾಹ್ನದ ವೇಳೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ. ತಪ್ಪಿಸಿಕೊಳ್ಳಲು ಯತ್ನಿಸಿ ಸಾಧ್ಯವಾಗದೇ ನೆಲಕ್ಕೆ ಕುಸಿದ ರೈತನ ಮೇಲೆ ಆನೆ ಕಾಲಿಟ್ಟಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಜಿಲ್ಲೆಯಲ್ಲಿ ಆನೆಗಳು ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕೈಗೊಂಡಿಲ್ಲ ಎಂದು ಆರೋಪಿಸಿ, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನಂಜನಗೂಡು-ಆನೆ ದಾಳಿ ಪ್ರಕರಣ: ಇತ್ತೀಚೆಗೆ ನಂಜನಗೂಡು ತಾಲೂಕಿನ ಆಕಳ ಗ್ರಾಮದಲ್ಲಿ ಜಮೀನಿಗೆ ನುಗ್ಗಿದ ಕಾಡಾನೆ ತುಳಿತಕ್ಕೆ ರೈತ ತನ್ನ ಕಾಲು ಕಳೆದುಕೊಂಡ ಘಟನೆ ನಡೆದಿತ್ತು. ಶೆಟ್ಟಹಳ್ಳಿ ಗ್ರಾಮದ ಬೋಳಯ್ಯ ತೀವ್ರವಾಗಿ ಗಾಯಗೊಂಡಿದ್ದರು. ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು, ಹುಲ್ಲಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಗ್ರಾಮಸ್ಥರ ಮತ್ತು ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಕಾಲು ಕಳೆದುಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದರು. ಇಲಾಖೆಯಿಂದ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಜಮೀನಿಗೆ ನುಗ್ಗಿದ ಕಾಡಾನೆಗಳ ತುಳಿತದಿಂದ ರೈತನ ಕಾಲು ಮುರಿತ