ರಾಮನಗರ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇನ್ನು ನೆನಪು ಮಾತ್ರ. ಆದ್ರೆ, ಅವರು ತಮ್ಮ ಕನಸೊಂದನ್ನು ಬಿಟ್ಟು ಹೋಗಿದ್ದಾರೆ. ಬಿಡದಿ ಬಳಿಯ ಶೇಷಗಿರಿ ಹಳ್ಳಿಯಲ್ಲಿನ ಅವರ ಅಚ್ಚು ಮೆಚ್ಚಿನ ಜಾಗದಲ್ಲಿ ಫಾರಂ ಹೌಸ್ ನಿರ್ಮಾಣ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದ ನಟ ಪುನೀತ್ ರಾಜ್ಕುಮಾರ್ ಅವರ ಕನಸು ಕನಸಾಗಿಯೇ ಉಳಿದುಕೊಂಡಿದೆ.
ಎಲ್ಲಿದೆ ಫಾರಂ ಹೌಸ್?
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಶೇಷಗಿರಿಹಳ್ಳಿ ಬಳಿ ಪುನೀತ್ ರಾಜ್ಕುಮಾರ್ ಅವರ ಅಚ್ಚುಮೆಚ್ಚಿನ ಜಮೀನು ಇದೆ. ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತ್‌ಗೆ ಸೇರಿದೆ ಶೇಷಗಿರಿಹಳ್ಳಿಯ ಸರ್ವೇ ನಂ 72 ಹಾಗೂ 73ಕ್ಕೆ ಸೇರಿದ ಸುಮಾರು 14 ರಿಂದ 15 ಎಕರೆ ಜಮೀನು ಡಾ.ರಾಜ್ಕುಮಾರ್ ಅವರಿಗೆ ಸೇರಿತ್ತು.
ದಿವಂಗತ ಡಾ.ರಾಜ್ ಕುಮಾರ್ ಬೆಂಗಳೂರು ಮೈಸೂರಿಗೆ ಶೂಟಿಂಗ್ ತೆರಳುವ ಸಂದರ್ಭದಲ್ಲಿ ಬಿಡದಿಯಲ್ಲಿ ಇಡ್ಲಿ ತಿಂದೆ ಮುಂದೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಡಾ. ರಾಜ್ ಇಲ್ಲೊಂದು ಜಮೀನು ಖರೀದಿಸುವ ಯೋಜನೆ ಮಾಡಿ ಅಂದೇ 15 ಎಕರೆ ಜಾಗವನ್ನ ಶೇಷಗಿರಿಹಳ್ಳಿಯಲ್ಲಿ ತೆಗೆದುಕೊಂಡರು. ನಂತರ ಈ ಜಮೀನಿನ ಸಂಪೂರ್ಣ ಉಸ್ತುವಾರಿಯನ್ನ ತಮ್ಮ ಕೊನೆಯ ಮಗ ಪುನೀತ್ ರಾಜ್ಕುಮಾರ್ ಅವರಿಗೆ ವಹಿಸಿಕೊಟ್ಟಿದ್ದರು ಎನ್ನಲಾಗಿದೆ.
ಪುನೀತ್ ರಾಜ್ಕುಮಾರ್ ತಮ್ಮ ತಂದೆ ಹಾಗೂ ತಮ್ಮ ಅಚ್ಚುಮೆಚ್ಚಿನ ಜಾಗದಲ್ಲಿ ಒಂದು ಒಳ್ಳೆಯ ಫಾರಂ ಹೌಸ್ ನಿರ್ಮಾಣ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಈ ಬಗ್ಗೆ ತಮ್ಮ ಕುಟುಂಬಸ್ಥರ ಜತೆ ಕೂಡ ಚರ್ಚಿಸಿದ್ದರು ಎನ್ನಲಾಗಿದೆ. ಈ ನಡುವೆ ನೂತನ ಬೆಂಗಳೂರು ಮೈಸೂರು ಹೆದ್ದಾರಿಗೆ ಇವರ ಜಮೀನಿನ ಅಲ್ಪ ಭಾಗ ಕೂಡ ಹೋಗಿತ್ತು.
ಹೆದ್ದಾರಿಯ ಎಲ್ಲಾ ಕಾಮಗಾರಿಗಳು ಮುಗಿದ ನಂತರ ಇಲ್ಲೊಂದು ಫಾರಂ ಹೌಸ್ ನಿರ್ಮಾಣ ಮಾಡಬೇಕೆಂದು ಅಪ್ಪು ಕನಸು ಕಟ್ಟಿಕೊಂಡಿದ್ದರು. ಕೊನೆಗೂ ಪವರ್ ಸ್ಟಾರ್ ಕನಸು ಈಗ ಕನಸಾಗಿಯೇ ಉಳಿದಿದ್ದು, ಇನ್ನೆಂದು ಬಾರದ ಲೋಕಕ್ಕೆ ತೆರಳಿರುವುದು ವಿಪರ್ಯಾಸ.
ಇದನ್ನೂ ಓದಿ: "ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನ ಕರ್ನಾಟಕಕ್ಕೆ ಅಪಾರ ನಷ್ಟ": ಸಿಎಂ ಬೊಮ್ಮಾಯಿ ಸಂತಾಪ