ರಾಮನಗರ: ರಾಮನಗರದಲ್ಲಿ ಆನೆ ದಾಳಿ ಮುಂದುವರೆದಿದೆ. 8 ಕಾಡಾನೆಗಳು ಏಕಾ ಏಕಿ ದಾಳಿ ನಡೆಸಿ ಟೊಮೇಟೊ, ಬಾಳೆ ಬೆಳೆಯನ್ನು ಸಂಪೂರ್ಣ ನಾಶ ಪಡಿಸಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗ ಎಂಬುವರ ಜಮೀನಿನಲ್ಲಿ ನಿನ್ನೆ ತಡರಾತ್ರಿ ಎಂಟು ಕಾಡಾನೆಗಳ ಹಿಂಡು ದಾಳಿ ನಡೆಸಿ 2 ಎಕರೆಯಲ್ಲಿ ಬೆಳೆದಿದ್ದ ಟೊಮೇಟೊ ಹಾಗೂ 1 ಎಕರೆ ಬಾಳೆ ಗಿಡ ನಾಶ ಪಡಿಸಿವೆ.
ಈ ಸುದ್ದಿಯನ್ನೂ ಓದಿ: ಅಮ್ಮನಿಂದ ಬೇರ್ಪಟ್ಟ ಕರಡಿ ಮರಿಗಳ ರಕ್ಷಣೆ
ಸತತ 1 ತಿಂಗಳಿನಿಂದ ಈ ಭಾಗದಲ್ಲಿ ನಿರಂತರವಾಗಿ ಆನೆಗಳು ದಾಳಿ ನಡೆಸುತ್ತಿದ್ದು, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಆನೆಗಳ ದಾಳಿಗೆ ಮಾವಿನ ಸಸಿ, ತೆಂಗಿನ ಸಸಿಗಳಿಗೂ ಹಾನಿಯಾಗಿದ್ದು, ಆನೆ ದಾಳಿ ನಿಯಂತ್ರಿಸಲು ಅರಣ್ಯಾಧಿಕಾರಿಗಳು ಶಾಶ್ವತ ಕ್ರಮ ಜರುಗಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.