ರಾಮನಗರ: ತೋಟಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ತುಳಿದ ಪರಿಣಾಮ ವೃದ್ಧೆ ಗಂಭೀರವಾಗಿ ಗಾಯಗೊಂಡ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಿದೊಡ್ಡ ಗ್ರಾಮದಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಕನ್ನಿದೊಡ್ಡಿ ಗ್ರಾಮದ ಶಿವನಂಜೇಗೌಡ ಎಂಬುವರ ಪತ್ನಿ ಸುನಂದಮ್ಮ (60) ಗಾಯಗೊಂಡವರು. ಇವರ ತೊಡೆ ಹಾಗೂ ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುನಂದಮ್ಮ ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಗ್ರಾಮದಿಂದ ತುಸು ದೂರದಲ್ಲಿರುವ ತಮ್ಮ ತೋಟಕ್ಕೆ ತೆರಳುತ್ತಿದ್ದ ವೇಳೆ ನಾಲ್ಕು ಆನೆಗಳು ಪ್ರತ್ಯಕ್ಷವಾಗಿವೆ. ಕಾಡಾನೆಗಳ ಗುಂಪು ತನ್ನೆಡೆಗೆ ಬರುವುದನ್ನರಿತ ವೃದ್ಧೆ ಓಡಲು ಮುಂದಾಗಿದ್ದಾರೆ. ಈ ವೇಳೆ ಗಾಬರಿಯಿಂದ ಕಿರುಚಿಕೊಂಡು ಓಡುತ್ತಿರುವಾಗ ಅವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ, ಆನೆಗಳು ಆಕೆಯ ಬಳಿಯೇ ಸಾಗುವ ಸಂದರ್ಭದಲ್ಲಿ ಆನೆಯೊಂದು, ವೃದ್ಧೆಯ ತೊಡೆ ಹಾಗೂ ಕಿಬ್ಬೊಟ್ಟೆಯ ಮೇಲೆ ತುಳಿದಿದ್ದು ಗಾಯಗೊಂಡಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಈ ಘಟನೆ ಸಂಬಂಧ ವಲಯ ಅರಣ್ಯಾಧಿಕಾರಿ ಮುನ್ಸೂರ್ ಅಹ್ಮದ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.