ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯ ವಿದ್ಯಾನಗರ ಪಶ್ಚಿಮ ಬಡಾವಣಿಯ ನಿವಾಸಿಗಳದು ಇದೀಗ ಜೀವಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಹೆಸ್ಕಾಂ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬ ಹಾಕಿರುವುದು.
ಇಲ್ಲಿನ 2ನೇ ಕ್ರಾಸ್‌ನಲ್ಲಿ ವಿದ್ಯುತ್ ಕಂಬ ರಸ್ತೆ ಮಧ್ಯದಲ್ಲಿದ್ದು ಯಾವಾಗ ಏನಾಗುತ್ತೋ ಎಂಬ ಭಯದಲ್ಲಿ ಇಲ್ಲಿಯ ಜನ ವಾಸಿಸುತ್ತಿದ್ದಾರೆ. ವಿದ್ಯುತ್ ಕಂಬದ ಮೇಲೆ ವಿದ್ಯುತ್ ತಂತಿಗಳು ಹಾದುಹೋಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಸ್ಥಳೀಯರಿಗೆ ಕಂಬ ಇರುವುದು ತಿಳಿದೂ ಸಹ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಬೇರೆ ಕಡೆ ವಾಹನದ ಮೇಲೆ ಬಂದ ಸವಾರರು ಹಲವು ಬಾರಿ ಈ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಈ ಕುರಿತಂತೆ ಹೆಸ್ಕಾಂ ಅಧಿಕಾರಿಗಳು ಮತ್ತು ನಗರಸಭೆಗೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಈ ಕಂಬ ಸ್ಥಳಾಂತರಿಸಬೇಕು ಇಲ್ಲದಿದ್ದರೇ ಇದರಿಂದಾಗುವ ಅನಾಹುತಕ್ಕೆ ಹೆಸ್ಕಾಂ ಮತ್ತು ನಗರಸಭೆ ಅಧಿಕಾರಿಗಳನ್ನ ಹೊಣೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.