ರಾಮನಗರ : ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿದ್ದ ಚುನಾವಣೆ ಹಿನ್ನೆಲೆ ಗ್ರಾಮಕ್ಕೆ ತೆರಳುತ್ತಿದ್ದ ಚುನಾವಣಾಧಿಕಾರಿಗಳ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಬ್ಯಾಲೆಟ್ ಪೇಪರ್, ಲ್ಯಾಪ್ಟಾಪ್ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಇಂದು ನಡೆದಿದೆ. ಚುನಾವಣಾಧಿಕಾರಿ ಉಮೇಶ್ ಹಾಗೂ ಉಷಾ ಎಂಬುವರಿಗೆ ಮಾರಕಾಸ್ತ್ರದಿಂದ ಬೆದರಿಸಿ ಲ್ಯಾಪ್ ಟಾಪ್ ಹಾಗೂ ಬ್ಯಾಲೆಟ್ ಪೇಪರ್ ಕಳವು ಮಾಡಲಾಗಿದೆ.
ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿತ್ತು. ಈ ಸಂಬಂಧ ಚುನಾವಣಾ ಅಧಿಕಾರಿ ಉಮೇಶ್ ಹಾಗೂ ಉಷಾ ಸೇರಿ ಒಟ್ಟು ಐವರು ಇಲ್ಲಿನ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕೆಂಚನಹಳ್ಳಿ ಬಳಿ ಅಧಿಕಾರಿಗಳ ಬೊಲೆರೋ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ದರೋಡೆ ಮಾಡಿ ಪರಾರಿಯಾಗಿದ್ದಾರೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದ ಚುನಾವಣಾಧಿಕಾರಿಗೆ ಕಾರಿನಿಂದ ಡಿಕ್ಕಿ ಹೊಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಮಾಗಡಿ ತಾಲೂಕಿನ ಹೊಸಪಾಳ್ಯ ಹಾಲು ಉತ್ಪಾದಕ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ಇತ್ತು. ಚುನಾವಣಾ ಅಧಿಕಾರಿಗಳು ಕಾರಿನಲ್ಲಿ ಬರುವಾಗ ಹೊಸಳ್ಳಿ ಬಳಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚುನಾವಣಾ ಅಧಿಕಾರಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರ ಬಳಿಯಿದ್ದ 250 ಬ್ಯಾಲೆಟ್ ಪೇಪರ್ ಮತ್ತು 2 ಲ್ಯಾಪ್ಟಾಪ್ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ನಾಲ್ವರ ಗುರುತನ್ನು ಪತ್ತೆ ಹಚ್ಚಲಾಗಿದೆ.
ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಚುನಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪ್ರಕರಣದ ತನಿಖೆ ಬಳಿಕ ಹೆಚ್ಚಿನ ಸಂಗತಿ ತಿಳಿದುಬರಲಿದೆ ಎಂದು ಹೇಳಿದರು.
ನಾಲ್ವರ ವಿರುದ್ಧ ಎಫ್ಐಆರ್: ಪ್ರಕರಣ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದಾಸೇಗೌಡ, ಶ್ರೀನಿವಾಸ್(ಸೀನ), ಹೇಮಂತ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ರೈಲಿನಲ್ಲಿ ದರೋಡೆ ನಡೆಸುತ್ತಿದ್ದ ಚಾಕೊಲೇಟ್ ಗ್ಯಾಂಗ್ ಬಂಧನ