ರಾಮನಗರ: ನ್ಯಾಯಾಲಯಕ್ಕೆ ಗೌರವ ಕೊಟ್ಟು ದೂರದಿಂದ ಬಂದಿದ್ದ ಇಡಿ ಅಧಿಕಾರಿಗಳಿಗೆ ನಾವು ಸಹಕಾರ ನೀಡಿದ್ದೇವೆ. ನಮ್ಮ ತಾಯಿಗೆ ಕಳೆದ ವಾರದಿಂದ ಹುಷಾರಿರಲಿಲ್ಲ ಆದರೂ ನಾವು ಅಧಿಕಾರಿಗಳಿಗೆ ಸಹಕರಿಸಿದ್ದೇವೆ ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದರು.
ಕನಕಪುರ ತಾಲೂಕಿನ ಕೋಡಿಹಳ್ಳಿಯ ಡಿ ಕೆ ಬ್ರದರ್ಸ್ ನಿವಾಸಕ್ಕೆ ಹೈಕೋರ್ಟ್ ಆದೇಶದಂತೆ ಇಡಿ ಅಧಿಕಾರಿಗಳು ಭೇಟಿ ನೀಡಿದರು. ಡಿ ಕೆ ಸಹೋದರರ ತಾಯಿ ಗೌರಮ್ಮ ಅವರ ವಿಚಾರಣೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆಯಿಂದ ಆರಂಭಗೊಂಡ ವಿಚಾರಣೆ ಸಂಜೆ 8:30 ರವರೆಗೂ ನಡೆಯಿತು.
ಈ ಬಗ್ಗೆ ಡಿ ಕೆ ಸುರೇಶ್ ಮಾತನಾಡಿ, ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಮುಂದೆಯೂ ಕೂಡ ನೀಡುತ್ತೇವೆ. ಇಡಿ ಅಧಿಕಾರಿಗಳು ಬಂದಾಗ ಏನೋ ತೊಂದರೆಯಾಗುತ್ತೆ, ಗಲಾಟೆ ಆಗುತ್ತೆ ಎಂದೆಲ್ಲ ಬಿಂಬಿಸಿದ್ದರು. ಆದರೆ, ನಮ್ಮ ಕಾರ್ಯಕರ್ತರು ಯಾರೂ ಬರದಂತೆ ಮನವಿ ಮಾಡಿದ್ದೆವು. ಅದರಂತೆ ಅವರು ಯಾರೂ ತೊಂದರೆ ಮಾಡಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ಧನ್ಯವಾದ ಹೇಳ್ತೇವೆ ಎಂದರು.