ರಾಮನಗರ: ಮಾಗಡಿ ಪಟ್ಟಣದಲ್ಲಿ ಹುಚ್ಚು ನಾಯಿಯೊಂದು ಸಾರ್ವಜನಿಕರ ಜೀವಕ್ಕೆ ಸಂಚಕಾರವಾಗಿದ್ದು ಒಟ್ಟು 16 ಮಂದಿಗೆ ಕಚ್ಚಿ ಗಾಯಗೊಳಿಸಿದೆ.
ನಿನ್ನೆ ರಾತ್ರಿ ಮಾಗಡಿ ಪಟ್ಟಣದ ಸುತ್ತ ಮುತ್ತ ಹುಚ್ಚು ನಾಯಿ ಸಾರ್ವಜನಿಕರ ಮೇಲೆ ದಾಳಿ ಮಾಡಿದೆ. ರಾತ್ರಿ 13 ಮಂದಿಗೆ ನಾಯಿ ಕಚ್ಚಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ.
ಬೆಳಗ್ಗೆ ಮತ್ತೆ ಮೂವರ ಮೇಲೆ ಅದೇ ನಾಯಿ ದಾಳಿ ಮಾಡಿದೆ. ಮಾಗಡಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ನಿರ್ಭೀತಿಯಾಗಿ ಓಡಾಡುವುದೇ ಕಷ್ಟಕರವಾಗಿದೆ.
ಪುರಸಭೆಗೆ ಹಲವು ವರ್ಷಗಳಿಂದಲೂ ನಾಯಿಗಳ ಕಾಟ ತಪ್ಪಿಸಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕೂಡ ಬೀದಿ ನಾಯಿ ಹಿಡಿಯುವ ಕೆಲಸ ಮಾಡುತ್ತಿಲ್ಲ. ನಾಯಿ ಹಿಡಿದರೆ ಪ್ರಾಣಿ ಪ್ರಿಯರು ವಿರೋಧಿಸುತ್ತಾರೆ, ನಾವು ಏನು ಮಾಡಬೇಕೆಂದು ಕೇಳುತ್ತಾರೆ. ಒಂದೇ ದಿನ 16 ಮಂದಿ ಮೇಲೆ ಈ ನಾಯಿ ದಾಳಿ ಮಾಡಿದೆ. ಇನ್ನೆಷ್ಟು ಮಂದಿಗೆ ನಾಯಿ ಕಡಿಯಬೇಕು? ಆಗ ಪುರಸಭೆಯವರು ಎಚ್ಚೆತ್ತುಕೊಳ್ಳುತ್ತಾರಾ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗುತ್ತಿಗೆದಾರನ ಎಡವಟ್ಟು : ಜೀವಂತ ಸಮಾಧಿಯಾದ ಕಾರ್ಮಿಕ
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎ. ಮಂಜುನಾಥ್ ಅವರು ಪುರಸಭಾ ಅಧಿಕಾರಿಗಳ ಜೊತೆ ಮಾತನಾಡಿ ನಾಯಿ ಕಾಟ ತಪ್ಪಿಸುವ ಕೆಲಸವನ್ನು ಕೂಡಲೇ ಮಾಡಬೇಕೆಂದು ಸೂಚನೆ ನೀಡಿದ್ದಾರೆ.