ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ರೈತರು ಜಿಲ್ಲೆಯ ಕನಕಪುರದ ಮೇಕೆದಾಟಿಂದ ಪಾದಯಾತ್ರೆ ಕೈಗೊಂಡಿದ್ದು, ಸಂಸದ ಡಿ.ಕೆ.ಸುರೇಶ್ ರೈತರ ಪಾದಯಾತ್ರೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು.
ಕನಕಪುರದ ಮೇಕೆದಾಟಿನಿಂದ ವಿಧಾನಸೌಧದವರೆಗೆ ಒಟ್ಟು 5 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ. ಈ ಯೋಜನೆಯಿಂದ ರಾಜ್ಯಕ್ಕೆ ಬಹಳಷ್ಟು ಅನುಕೂಲ ಇದ್ದು, 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. 60 ಟಿಎಂಸಿ ಹೆಚ್ಚುವರಿ ನೀರನ್ನ ಶೇಖರಣೆ ಮಾಡಬಹುದು. ನಮ್ಮ ಭಾಗದ ರೈತರಿಗೆ ಮೇಕೆದಾಟು ಯೋಜನೆ ಸಾಕಷ್ಟು ಅನುಕೂಲವಾಗಲಿದ್ದು, ಯೋಜನೆ ಜಾರಿಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ತಿಳಿಸಬೇಕು. ಪ್ರಧಾನಿಗಳು ಈ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು. ಇಲ್ಲವಾದರೆ ರಾಜ್ಯದ ಜನರಿಗೆ ದೊಡ್ಡ ಮೋಸ ಮಾಡಿದಂತಾಗುತ್ತದೆ ಎಂದು ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಪಾದಯಾತ್ರೆಗೆ ಸಾಥ್ ನೀಡಿದರು.