ರಾಮನಗರ : ಕೊರೊನಾ ಹೆಸರಿನಲ್ಲಿ ನಡೆದಿರುವ ಹಗರಣವನ್ನ ಮುಚ್ಚಿ ಹಾಕಲು, ಡ್ರಗ್ಸ್ ವಿಚಾರವನ್ನ ಬಿಜೆಪಿ ದೊಡ್ಡದು ಮಾಡುತ್ತಿದೆ. ಅಲ್ಲದೆ ಡ್ರಗ್ಸ್ ಹೆಸರಲ್ಲಿ ಕೇವಲ ಒಂದಿಬ್ಬರು ನಟಿಯರ ಹೆಸರಲ್ಲಿ ಇಡೀ ಚಿತ್ರರಂಗವನ್ನ ಅಪಮಾನಿಸಲಾಗುತ್ತಿದೆ ಅಂತಾ ಸಂಸದ ಡಿ ಕೆ ಸುರೇಶ್ ಗಂಭೀರ ಆರೋಪ ಮಾಡಿದರು.
ರಾಮನಗರ ತಾಲೂಕಿನ ಬಿಡದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕೊರೊನಾ ಹೆಸರಿನಲ್ಲಿ ಖರೀದಿ ಮಾಡಿರುವ ವಸ್ತುಗಳ ಹಗರಣವನ್ನ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಹಾಗೂ ಹುಡುಗರನ್ನ ಬಳಸಿ ದಂಧೆ ಮಾಡುತ್ತಿರುವುದನ್ನ ಮೊದಲು ತನಿಖೆ ಮಾಡಲಿ, ಬೇಕಿದ್ರೆ ಕಮಿಟಿ ಮಾಡಿ ತನಿಖೆ ಆಗಲಿ. ಅವರ ಪಕ್ಷದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನ ತಡೆಯಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ಗೆ ಸುರೇಶ್ ಇದೇ ವೇಳೆ ಟಾಂಗ್ ನೀಡಿದ್ರು.
ಕೊರೊನಾ ವಿಚಾರವನ್ನ ರಾಜ್ಯ ಸರ್ಕಾರ ಮರೆತಿದೆ. ಈ ವಿಚಾರವನ್ನ ಬೇರೆ ಕಡೆ ಡೈವರ್ಟ್ ಮಾಡಲು ಯಾರೋ ಇಬ್ಬರು ನಟಿಯರ ವಿಚಾರ ದೊಡ್ಡದು ಮಾಡುತ್ತಿದ್ದಾರೆ ಎಂದ ಅವರು, ಡ್ರಗ್ಸ್ ದಂಧೆ ವಿಚಾರ ಈ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮೊದಲೇ ಗೊತ್ತಿತ್ತು. ಇಲ್ಲ ಅಂದ್ರೆ ಏಕಾಏಕಿ ಟನ್‌ಗಟ್ಟಲೇ ಡ್ರಗ್ಸ್ ಸಿಕ್ಕುತ್ತಿರಲಿಲ್ಲ ಅಂತಾ ಆರೋಪಿಸಿದ್ರು.
ಗ್ಲಾಮರ್ ಹಾಗೂ ಕನ್ನಡ ಚಿತ್ರರಂಗವನ್ನ ಬಳಸಿ ಇಡೀ ರಾಜ್ಯದ ಜನರ ದಿಕ್ಕನ್ನ ತಪ್ಪಿಸುವ ವ್ಯವಸ್ಥಿತ ಪಿತೂರಿಯನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ. ಕೇವಲ ಇಬ್ಬರು ನಟಿಯರನ್ನ ಮುಂದೆ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಅಂತಾ ವಾಗ್ದಾಳಿ ನಡೆಸಿದ್ರು.
ನಳೀನ್ ಕುಮಾರ್ ಕಟೀಲ್ ಅವರ ಪಕ್ಷದಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳನ್ನ ಮಾಡುತ್ತಿರುವುದನ್ನ ಪತ್ತೆ ಹಚ್ಚಲಿ, ಕಿಸ್ ಕೊಟ್ಟಿರುವುದು, ಬ್ಲ್ಯೂ ಫಿಲಂ ನೋಡಿರೋದು ಯಾರು? ಇದರ ಇತಿಹಾಸ ಯಾರದು ಅಂದ್ರೆ ಅದು ಬಿಜೆಪಿಯವರದ್ದು ಅಂತಾ ಲೇವಡಿ ಮಾಡಿದ್ರು.
ಈ ಡ್ರಗ್ಸ್ ದಂಧೆ ವ್ಯವಹಾರದ ಬೆನ್ನತ್ತಿರುವ ಪೊಲೀಸ್ ಇಲಾಖೆಗೂ ಯಾರು ದಂಧೆ ಮಾಡುತ್ತಿದ್ದಾರೆ ಅನ್ನುವ ವಿಚಾರ ಗೊತ್ತು ಅಂತಾ ಪೊಲೀಸ್ ಇಲಾಖೆ ವಿರುದ್ಧ ಆರೋಪ ಮಾಡಿದ್ರು. ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಬಂಧಿಸಬೇಕು ಅಂತಾ ಹೇಳಿರುವವರನ್ನ ಮೊದಲು ಬಂಧಿಸಬೇಕು. ರಾಜಕಾರಣಕ್ಕೋಸ್ಕರ ಆರೋಪ ಮಾಡಬಾರದು. ಜಮೀರ್ ಅಹ್ಮದ್ ವಿರುದ್ಧ ಮಾತನಾಡಿದ್ರೆ ನಾನು ಲೀಡರ್ ಹಾಗುತ್ತೇನೆ. ನಾನು ಮುಸ್ಲಿಂ ವಿರೋಧಿ ಅಂತಾ ತೋರಿಸಿಕೊಳ್ಳುವುದನ್ನ ಬಿಡಬೇಕು ಅಂತಾ ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರೇಳದೆ ಸುರೇಶ್ ಟಾಂಗ್ ನೀಡಿದರು.