ರಾಮನಗರ: ನಾಲಿಗೆ ಮೂಳೆ ಇಲ್ಲ ಎಂದು ನಮ್ಮ ಪಾದಯಾತ್ರೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಏನು ಬೇಕಾದ್ರು ಮಾತನಾಡಿದ್ರು ನಾವು ಸಹಿಸಿಕೊಳ್ಳಬೇಕಾ, ನೀವು ಮಾಡಿದ್ರೆ ಮಾತ್ರ ಪಾದಯಾತ್ರೆ, ನಾವು ಮಾಡಿದ್ರೆ ಅದು ಪಾದಯಾತ್ರೆ ಅಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ರಾಮನಗರದಿಂದ ಬಿಡದಿ ತಲುಪಿದೆ. ಈ ವೇಳೆ ಸಾವಿರಾರು ಕಾರ್ಯಕರ್ತರು ಡಿ ಕೆ ಶಿವಕುಮಾರ್ ಅವರಿಗೆ ಜಯಘೋಷ ಕೂಗಿದರು. ಬಳಿಕ ಮಾತನಾಡಿದ ಅವರು, ಉರಿ ಬಿಸಿಲು, ಟಾರು ರಸ್ತೆಯಲ್ಲಿ ಇಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೇವೆ. ಅನೇಕ ಕಡೆಗಳಲ್ಲಿ ಮರಗಳಿಲ್ಲದೆ ಬಿಸಿಲಲ್ಲೇ ಗುಂಡಿ, ಬಂಡೆ ಎಲ್ಲವನ್ನು ನೋಡಿಕೊಂಡು ಬಂದಿದ್ದೇವೆ. ನಮ್ಮ ಸ್ನೇಹಿತರೊಬ್ಬರು ನನ್ನನ್ನು ಮಣ್ಣಿನ ಮಗ ಎಂದು ಹೇಳಿದರು. ಆದರೆ ನಾನು ಮಣ್ಣಿನ ಮಗ ಅಲ್ಲ, ಕಲ್ಲಿನ ಮಗ ಎಂದು ನಮ್ಮಣ್ಣ ಕುಮಾರಣ್ಣಾ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ವಿರುದ್ಧ ಡಿಕೆಶಿ ವ್ಯಂಗ್ಯ: ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲು ಬಂಡೆ ಚಚ್ಚಿದಾಗಲೇ ಚಪ್ಪಡಿಯಾಗೋದು, ಕೆತ್ತಿದಾಗ ಶಿಲೆ ಆಗೋದು. ನಂತರ ಅದು ಮರಳಾಗಿ ಮಣ್ಣಾಗುತ್ತದೆ. ಅಂದರೆ ಮಣ್ಣಿನ ಮೂಲ ಸ್ವರೂಪ ಕಲ್ಲು. ಈ ಕಲ್ಲನ್ನು ನೀವು ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳಿ. ನಮ್ಮ ಅಣ್ಣನೂ ಅವರಿಗೆ ಬೇಕಾದ ಹಾಗೆ ಬಳಸಿಕೊಳ್ಳಲಿ. ನಮಗೆ ಯಾರಾದರೂ ಹೊಡೆಯಲು ಬಂದರೆ ನಾವು ಅದನ್ನು ತಪ್ಪಿಸಬಹುದು. ಆದರೆ ನಮ್ಮ ಬಗ್ಗೆ ಅನಗತ್ಯವಾಗಿ ಮಾತನಾಡುವವರನ್ನು ತಪ್ಪಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪಕ್ಷಾತೀತ ಹೋರಾಟ: ಕುಮಾರಣ್ಣಾ ಅವರು ಜಲಧಾರೆ ಹೋರಾಟ ಮಾಡುತ್ತೇವೆ ಎಂದು ಯೋಜನೆ ಹಾಕಿಕೊಂಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚಾಮರಾಜನಗರದಿಂದ ಬೀದರ್ವರೆಗೂ ಹೋರಾಟ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆಯೇ ಹೊರತು ಯಾವುದೇ ತಕರಾರಿಲ್ಲ. ನಾವು ಸಾಕಷ್ಟು ಕಾರ್ಯಕ್ರಮ ಮಾಡಿದ್ದೇವೆ. ಇಂದಿನ ಹೋರಾಟಕ್ಕೆ ಜನತಾದಳದವರೂ ಬಂದಿದ್ದರು. ಈ ಕ್ಷೇತ್ರದಲ್ಲಿರುವ, ಇಲ್ಲಿರುವ ಜನರಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರ ಇಲ್ಲ, ಎಲ್ಲಾ ಪಕ್ಷದವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟ. ಎಲ್ಲಾ ವರ್ಗದ ಜನರ ಹೋರಾಟ. ಕಾಂಗ್ರೆಸ್ ಕೇವಲ ಮುಂದಾಳತ್ವ ವಹಿಸಿಕೊಂಡಿದೆ ಎಂದರು.
ಇಂದಿನ ಹೋರಾಟ ನೀರಿಗಾಗಿ: ನೀರಿಗೆ ಬಣ್ಣ, ಆಕಾರ, ರುಚಿ ಇಲ್ಲ. ಇದನ್ನು ಎಲ್ಲಿ ಬೇಕಾದರೂ ಹರಿಸಬಹುದು. ಈ ನೀರು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ನಾವಿಂದು ಹೋರಾಟ ಮಾಡುತ್ತಿದ್ದೇವೆ. ನಮ್ಮ ನೀರು, ನಮ್ಮ ಹಕ್ಕು. ಹೀಗಾಗಿ ನೀರಿಗಾಗಿ ನಡೆಯುತ್ತಿದ್ದೇವೆ. ಈ ಹೋರಾಟದಲ್ಲಿ ನಮಗೆ ಅನೇಕರು, ನೀರು, ಮಜ್ಜಿಗೆ, ಎಳನೀರು ಕೊಟ್ಟು ಉಪಚರಿಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಮಹಾನ್ ವ್ಯಕ್ತಿಗಳ ಹೋರಾಟ ಸ್ಫೂರ್ತಿ: ಎಸ್.ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ ಕೃಷ್ಣಾ ನದಿಗಾಗಿ ಹೆಜ್ಜೆ ಹಾಕಿದ್ದರು. ಅಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದರು. ನಮ್ಮ ಆಂಧ್ರ ಪ್ರದೇಶ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ಹೆಜ್ಜೆ ಹಾಕಿದ್ದರು. ಈಗಿನ ಆಂಧ್ರ ಸಿಎಂ ಜಗನ್ ಕೂಡ ಪಾದಯಾತ್ರೆ ಮಾಡಿದ್ದಾರೆ. ಇವರೆಲ್ಲರೂ ಛಲದಿಂದ, ಸಂಕಲ್ಪದಿಂದ ಹೋರಾಟ ಮಾಡಿದ್ದಾರೆ. ನಮಗೆ ಈ ಹೋರಾಟದ ಸ್ಫೂರ್ತಿ ತುಂಬಿದವರು. ನಾವು ಮಹಾತ್ಮ ಗಾಂಧೀಜಿಯವರ ಹಿಂಬಾಲಕರು. ಅವರು ಹಾಗೂ ಕಾಂಗ್ರೆಸ್ ಪಕ್ಷ ಈ ತ್ರಿವರ್ಣ ಧ್ವಜದ ರೂವಾರಿಗಳು ಎಂದರು.
ಬಾಲಕೃಷ್ಣ ಅವರು ಹುಟ್ಟುಹಬ್ಬದ ಪ್ರಯುಕ್ತ ತಿರುಪತಿಯಲ್ಲಿ ಪೂಜೆ ಇಟ್ಟುಕೊಂಡಿದ್ದರು. ಆದರೆ ಪಾದಯಾತ್ರೆ ದಿನಾಂಕ ನಿಗದಿಯಾದ ಬಳಿಕ ನನ್ನ ದೇವರುಗಳು ಇಲ್ಲೇ ಮಾಗಡಿಯಲ್ಲಿ ಇದ್ದಾರೆ. ಜನರೇ ನನ್ನ ದೇವರು. ಅವರಿಗೆ ಪೂಜೆ ಮಾಡುತ್ತೇನೆ ಎಂದು ನಮ್ಮ ಜತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿ ಅವರಿಗೆ ಜನ್ಮದಿನದ ಉಡುಗೊರೆ ನೀಡಬೇಕು. ನಾನು ಇಲ್ಲೇ ಇದ್ದು, ಇಲ್ಲಿ ಸ್ವಾಮೀಜಿ ಪುತ್ಥಳಿಗೆ ಪೂಜೆ ಮಾಡಿ ಇಲ್ಲಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರು ತಲುಪಬೇಕು ಎಂದು ಡಿಕೆಶಿ ತಿಳಿಸಿದರು.
ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ರಾಜಕಾರಣ ಇಂದು ಇರುತ್ತದೆ, ನಾಳೆ ಹೋಗುತ್ತದೆ. ನಾವು ಬದುಕಿರುವಾಗ ಒಂದು ಹೋರಾಟದಲ್ಲಿ ಭಾಗವಹಿಸಿ ನಮ್ಮ ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ನೀವೆಲ್ಲ ಹೋರಾಟದಲ್ಲಿ ಭಾಗವಹಿಸಿ ಇತಿಹಾಸ ಪುಟ ಸೇರಿದ್ದೀರಿ ಎಂದು ಡಿಕೆಶಿ ಹೇಳಿದರು.
ಈ ವೇಳೆ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಚಲುವರಾಯಸ್ವಾಮಿ, ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಎಚ್ ಸಿ. ಬಾಲಕೃಷ್ಣ, ಎಂಎಲ್ಸಿ ಎಸ್ ರವಿ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ : ಸಿದ್ದರಾಮಯ್ಯ, ಡಿಕೆಶಿ ಅತ್ತೆ-ಸೊಸೆ ಇದ್ದಂಗೆ : ಸಚಿವ ಈಶ್ವರಪ್ಪ ವ್ಯಂಗ್ಯ