ರಾಮನಗರ: ಗೌರಿ ಗಣೇಶ ಹಬ್ಬದ ಪ್ರಯುಕ್ತ ತಮ್ಮ ಕುಟುಂಬದ ವಾಡಿಕೆಯಂತೆ ಡಿಕೆ ಬ್ರದರ್ಸ್ ಹಿರಿಯರ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು.
ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿರುವ ತಂದೆ ಡಿ.ಕೆ. ಕೆಂಪೇಗೌಡರ ಸಮಾಧಿಗೆ ಡಿಕೆ ಸಹೋದರರು ಪೂಜೆ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿವರ್ಷ ಗಣೇಶ ಹಬ್ಬದ ದಿನದಂದು ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.
ಕಳೆದ ವರ್ಷ ಪೂಜೆಗೆ ಅವಕಾಶ ಸಿಕ್ಕದೆ ಬಿಕ್ಕಿ ಬಿಕ್ಕಿ ಅತ್ತಿದ್ದರು:
ಕಳೆದ ಗೌರಿ ಹಬ್ಬದ ಕೆಲವೇ ದಿನ ಮೊದಲು ಇಡಿ ಇಲಾಖೆ ಡಿ.ಕೆ. ಶಿವಕುಮಾರ್ ಅವರನ್ನ ಅಕ್ರಮ ಸಂಪತ್ತು ಪ್ರಕರಣ ಸಂಬಂಧ ಬಂಧಿಸಿತ್ತು. ನಂತರ ಇಡಿ ಅಧಿಕಾರಿಗಳ ಬಳಿ ಇನ್ನಿಲ್ಲದಂತೆ ಗೋಗರೆದ ಡಿ.ಕೆ. ಶಿವಕುಮಾರ್ ಅವರನ್ನ ಬಿಡುಗಡೆ ಮಾಡಲು ಅಥವಾ ಪೂಜೆಮಾಡಲು ಅವಕಾಶ ಕಲ್ಪಿಸಲು ಕೂಡ ನಿರಾಕರಿಸಿದ್ದರು.
ಇದನ್ನು ನೆನೆದು ಕಣ್ಣೀರಿಟ್ಟಿದ್ದ ಡಿ.ಕೆ. ಶಿವಕುಮಾರ್ ಅಧಿಕಾರಿಗಳ ವಿರುದ್ಧ ದುಃಖಭರಿತ ಆಕ್ರೋಶ ಹೊರ ಹಾಕಿದ್ದರು. ಅದಾಗಿ ಕೆಲವು ತಿಂಗಳ ಬಳಿಕ ಬಿಡುಗಡೆಯಾದ ಬೆನ್ನಲ್ಲೇ ಬಂದು ಪೂಜೆ ಸಲ್ಲಿಸಿದ್ದರು. ಈ ಬಾರಿ ಕುಟುಂಬ ಸಮೇತ ಪೂಜೆ ಸಲ್ಲಿಸುವ ಮೂಲಕ ತಮ್ಮ ಸಂಪ್ರದಾಯ ಮುಂದುವರಿಸಿದ್ದಾರೆ.