ರಾಮನಗರ : ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅಪರಿಚಿತ ಮೃತ ದೇಹದ ಅಂಗಗಳು ಪತ್ತೆಯಾಗಿವೆ. ನಗರದ ಮಂಗಳವಾರಪೇಟೆಯ 10ನೇ ಕ್ರಾಸ್‌ನ ಕುಡಿಯುವ ನೀರಿನ ಪೈಪ್‌ನಲ್ಲಿ ಮತ್ತೆ ಮಾಂಸದ ಮುದ್ದೆ, ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇತ್ತೀಚಿಗೆ ಕೆಲ ದಿನಗಳ ಹಿಂದೆ ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್ನಲ್ಲಿ ಅಪರಿಚಿತ ಮಹಿಳೆ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿತ್ತು.
ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆ ಮಾಡಿ ದೇಹವನ್ನ ತುಂಡು ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಕೂಡ ಹಲವು ದಿನಗಳಿಂದ ಸ್ಥಗಿತಗೊಂಡಿತ್ತು.
ಇದನ್ನೂ ಓದಿ : ರಾಮನಗರ : ವಾಟರ್ ಟ್ಯಾಂಕ್ನಲ್ಲಿ ಮಹಿಳೆ ಮೃತದೇಹ ಪತ್ತೆ.. ನೀರು ಪೂರೈಕೆ ಸ್ಥಗಿತಗೊಳಿಸಿದ ನಗರಸಭೆ
ಕಳೆದ 15 ದಿನಗಳ ಹಿಂದೆ ಕೋರ್ಟ್ ಪಕ್ಕದ ಓವರ್ ಟ್ಯಾಂಕ್‌ನ ಪೈಪ್‌ನಲ್ಲಿ ಕಾಲು ಪತ್ತೆಯಾಗಿ ಇಲ್ಲಿನ ಜನರನ್ನ ತೀವ್ರ ಆತಂಕಕ್ಕೀಡು ಮಾಡಿತ್ತು. ಇದೀಗ ಅದರ ಕೂಗಳತೆ ದೂರದಲ್ಲಿನ ಪೈಪ್‌ನಲ್ಲಿ ಮೂಳೆ ಹಾಗೂ ಮಾಂಸದ ಮುದ್ದೆ ಇಂದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಂಸದ ಮುದ್ದೆಯನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್ಎಸ್ಎಲ್‌ಗೆ ಕಳುಹಿಸಿಕೊಟ್ಟಿದ್ದು, ಕಾರ್ಯಾಚರಣೆ ಮುಂದುವರೆದಿದೆ.