ರಾಮನಗರ: ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡುವುದಕ್ಕೆ ಪ್ರಧಾನಿ ಮೋದಿ ಅವರಿಗೆ ತಾಕತ್ತು ಇಲ್ವಾ ಎಂಬ ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್ಗೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಕೆಲವರು ಮನಸಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದರು.
ದೇಶಕ್ಕೆ ನಾಯಕತ್ವ, ಸದೃಢತೆ, ಶಕ್ತಿ, ಸ್ವಾಭಿಮಾನವಿದೆ. ಭಾರತಕ್ಕೆ ಎಂತಹ ಸವಾಲನ್ನೂ ಎದುರಿಸಲು ಧೈರ್ಯ ಇದೆ ಎಂದು ತೋರಿಸಿಕೊಟ್ಟವರು ಪ್ರಧಾನಿ ಮೋದಿ. ಹೀಗಾಗಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದರು.
ಜಿಲ್ಲಾ ಪಂಚಾಯತ್ ಭವನದಲ್ಲಿ ಕೆಡಿಪಿ ಸಭೆಗೆ ಆಗಮಿಸಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ಸಂಕಷ್ಟ ಎದುರಿಸುತ್ತಿದೆ. ಅವರಿಗೆ, ಅವರ ಪಕ್ಷಕ್ಕೆ ಯಾವ ಯೋಗ್ಯತೆ ಇಲ್ಲದೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಏನೇ ಹೇಳಬೇಕಾದರೂ ಯೋಚಿಸಲು ಭಗವಂತ ಬುದ್ಧಿ ಕೊಡಲಿ ಎಂದರು.
ದೇಶದ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನೂರಾರು ಜನ ತ್ಯಾಗ ಬಲಿದಾನ ಮಾಡಿದ್ದಾರೆ. ಈ ರೀತಿ ಬಾಯಿಗೆ ಬಂದಂಗೆ ಮಾತಾಡಿ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದಾರೆ. ಇವರನ್ನು ದೇಶದ ನಾಗರಿಕರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ವ್ಯಾಪಕ ಹೆಚ್ಚಳಕ್ಕೆ ಪ್ರತಿಕ್ರಿಯಿಸಿ, ಇದು ಸೋಂಕಿನ ಕಾಯಿಲೆ. ಹಂತ ಹಂತವಾಗಿ ತಡೆಗಟ್ಟುವ ಕೆಲಸ ನಡೆಯುತ್ತಿದೆ ಎಂದರು.