ರಾಮನಗರ: ನಾನು ಮಾತ್ರ ಮಂತ್ರಿಯಾಗಬಹುದು, ಉಳಿದ ಶಾಸಕರುಗಳಿಗೆ ಅಧಿಕಾರ ಸಿಗದಿದ್ದರೆ ಹೇಗೆ? ಅದು ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಗಬೇಕು, ಸಿಕ್ಕೆ ಸಿಗುತ್ತದೆ. ಈ ನಿಟ್ಟಿನಲ್ಲಿ ನಿಗಮ ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಕನಕಪುರದಲ್ಲಿ ಮಂಗಂಳವಾರ ನಿಗಮಮಂಡಳಿ ನೇಮಕಾತಿ ಹಾಗೂ ಯಾರಿಗೆಲ್ಲಾ ಅವಕಾಶ ನೀಡಲಾಗುತ್ತದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಶಾಸಕರು ಕೇಳುತ್ತಿಲ್ಲ, 20-25 ಜನರು ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ಸಿಗಬಹುದು. ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಾಗುವುದು. ನಮ್ಮ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಅವಕಾಶ ಕೊಟ್ಟೆ ಕೊಡುತ್ತೇವೆ. ಶಾಸಕರುಗಳು ನಮ್ಮ ನಾಯಕರುಗಳಲ್ಲವೇ? ಮಾಧ್ಯಮಗಳಿಗೇಕೆ ಇಷ್ಟು ಅವಸರ? ಎಂದು ಪ್ರಶ್ನಿಸಿದರು.
ಕನಕಪುರಕ್ಕಿಂತ ರಾಮನಗರವೇ ನನ್ನ ಮೊದಲ ಆದ್ಯತೆ: ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿ ಹೋರಾಟಗಾರರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ನಾನು ರಾಮನಗರದ ಪಿಎಲ್ಡಿ ಕಟ್ಟಡವನ್ನು ಕೆಡವಿ ಜಿಲ್ಲಾ ಆಸ್ಪತ್ರೆ ಕಟ್ಟಿಸಿದಾಗ ದಳ-ಬಿಜೆಪಿಯವರು ಯಾರೂ ಬರಲಿಲ್ಲ, ಏಕೆ? ಇಂತಹ ಧೈರ್ಯ ಮಾಡಿದ ಪರಿಣಾಮ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ರಾಮನಗರದಲ್ಲಿ ಆಗಿದೆ. ನನ್ನ ಮೊದಲ ಆದ್ಯತೆ ಕನಕಪುರಕ್ಕಲ್ಲ, ರಾಮಮನಗರಕ್ಕೆ ಎಂದರು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬಜೆಟ್ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಎಂದು ಸೇರಿಸಿದ್ದರು. ಆನಂತರ ಯೋಜನೆ ಕಾರ್ಯಗತಗೊಂಡು, ಟೆಂಡರ್ ಆಗಿ ಭೂಮಿ ಪೂಜೆ ಒಂದು ಬಾಕಿ ಇತ್ತು. ರಾಮನಗರಕ್ಕೆ ಏನು ಬರಬೇಕೊ ಅದು ಬರಬೇಕು. ಕನಕಪುರಕ್ಕೆ ಏನು ಬರಬೇಕು ಅದೂ ಕೂಡ ಬರಬೇಕು. ರಾಮನಗರಕ್ಕೆ ಬರಬಾರದು ಎಂದು ಹೇಳಿದವರು ಯಾರು? ಈಗ ಪ್ರಸ್ಥಾವನೆಯಾಗಿರುವ ಕಾಲೇಜು ರಾಮನಗರದಿಂದ 3 ಕಿಲೋ ಮೀಟರ್ ದೂರದಲ್ಲಿದೆ, ಮತ್ತು ರಾಮನಗರದಲ್ಲಿ ವಿಶ್ವವಿದ್ಯಾಲಯ ಇರಲಿದೆ. ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಇರಬೇಕು ಎನ್ನುವ ನಿಯಮವಿರುವ ಕಾರಣ ಅದನ್ನು ಕನಕಪುರದ ಬಳಿ ಮಾಡಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಕನಕಪುರದಲ್ಲಿ ತಾಯಿ - ಮಗು ಆಸ್ಪತ್ರೆ ಉದ್ಘಾಟನೆ ವೇಳೆ ನಾನು ಮಾತನಾಡಿರುವ ಮಾತುಗಳನ್ನು ಇನ್ನೊಮ್ಮೆ ಕೇಳಿ ಮತ್ತು ಕುಮಾರಸ್ವಾಮಿ ಅವರು ಬಜೆಟ್ ಭಾಷಣದ ವೇಳೆ ಮಾತನಾಡಿರುವ ಮಾತುಗಳು, ಸಿದ್ದರಾಮಯ್ಯ ಅವರು ಬಜೆಟ್ ಭಾಷಣದ ವೇಳೆಯ ಮಾತುಗಳನ್ನು ಕೇಳಿ, ಯಾರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸತ್ಯ ತಿಳಿಯುತ್ತದೆ. ಕನಕಪುರದಲ್ಲಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಹಾಕಲಾಯಿತು. ಆಗ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಸ್ಥಳಾಂತರ ಮಾಡಿಕೊಡುತ್ತೇವೆ ಎಂದಿದ್ದರು. ಈ ವಿಚಾರದಲ್ಲಿ ಬಿಜೆಪಿ- ದಳದವರು ರಾಜಕಾರಣ ಮಾಡಬೇಕು ಎಂದರೆ ರಾಜಕಾರಣ ಮಾಡಲಿ, ನನಗೆ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಂದ್ ಕರೆ ಕೊಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಹಾದಿ ಬೀದಿಯಲ್ಲಿ ಹೋಗುವವರಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಶ್ನೆ ಕೇಳುವವರನ್ನು ಪ್ರಶ್ನೆ ಕೇಳಬೇಡ ಎಂದು ಹೇಳಲಾಗುತ್ತದೆಯೇ? ಯಾರಿಗೂ ಉತ್ತರ ಕೊಡಲು ತಯಾರಿಲ್ಲ. ಮೊದಲೇ ಕನಕಪುರಲ್ಲಿ ಟೆಂಡರ್ ಕರೆಯಲಾಗಿತ್ತು. ಈಗ ಮಾಡದಿದ್ದರೆ ನಷ್ಟ ತುಂಬಿಕೊಡಬೇಕಾಗುತ್ತದೆ. ರಾಮನಗರದ ಜನತೆಗೆ ಎರಡು ಕಡೆ ಸಿಕ್ಕಿರುವುದು ಪುಣ್ಯ. ಕುಮಾರಸ್ವಾಮಿ ಅವರ ಕಾಲದಲ್ಲಿ ರಾಮನಗರದಲ್ಲಿ ವಿಶ್ವವಿದ್ಯಾಲಯ ಮಾಡಬೇಕು ಅಂತ ಅಂದುಕೊಂಡಿದ್ದರು. ಇವತ್ತಿನತನಕ ಅದು ಆಗಿಲ್ಲ. ಕುಮಾರಸ್ವಾಮಿ ಅವರ ಶಿಷ್ಯನ 15 ಎಕರೆ ಜಮೀನು ಬಿಟ್ಟು ಹೋಗಿದೆ, ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಬೇಕು. ಎರಡೂ ಕಡೆಯೂ ಕಟ್ಟಡ ಯೋಜನೆ ಆಗಿದೆ. ಅವರಿಗೆ ಏನು ಸಿಗಬೇಕು ಅವರಿಗೆ, ನಮಗೆ ಏನು ಸಿಗಬೇಕೋ ಅದು ನಮಗೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ರಾಮನಗರದಲ್ಲಿ ಭಾರತ್ ಜೋಡೋ ನೆನಪಿನ ಪಾದಯಾತ್ರೆ: ಸೆ.7ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದೇ ನೆನಪಿಗೆ ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎನ್ನುವ ಯೋಚನೆ ಇತ್ತು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮನಗರದಲ್ಲಿ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ. ಅದೇ ದಿನ ಸಚಿವ ಸಂಪುಟ ಸಭೆ ಇರುವ ಕಾರಣ ಇತರೇ ಮಂತ್ರಿಗಳಿಗೆ ಸೆ.8 ರಂದು ಮಾಡಬಹುದು ಎಂದು ಸೂಚನೆ ನೀಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಸಂಜೆ 5 ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ನನ್ನ ಊರಿನ ಶಿಕ್ಷಕರನ್ನು ನೋಡಲು ಬಂದೆ: ಪ್ರತಿ ವರ್ಷ ಅನೇಕ ಕಾರ್ಯಗಳ ಒತ್ತಡದಿಂದ ನಮ್ಮ ಕನಕಪುರ ತಾಲೂಕಿನ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಲು ಆಗಿರಲಿಲ್ಲ. ಈ ವರ್ಷ ಅನೇಕ ಕೆಲಸಗಳ ಒತ್ತಡ ಇದ್ದರು ಸಹ ಬಂದಿದ್ದೇನೆ. ನಮ್ಮ ರಾಜ್ಯದಲ್ಲಿ 40,000 ಶಿಕ್ಷಕರ ಕೊರತೆ ಇದೆ. ನಮ್ಮ ಕಾಂಗ್ರೆಸ್ ಪಕ್ಷದ ಪ್ರಮುಖ ಆದ್ಯತೆ ಶಿಕ್ಷಣ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಗ್ರಾಮೀಣ ಪ್ರದೇಶದ ಶಾಲೆಗಳು ಸೇರಿ ಎಲ್ಲ ಭಾಗದ ಮಕ್ಕಳಿಗೂ ಗ್ಲೋಬಲ್ ಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಸಿಎಸ್ಆರ್ ಹಣದ ಸದುಪಯೋಗಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರೆಪಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿಯಮ ಬದಲಾವಣೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ, ಅದು ಆಡಳಿತಾತ್ಮಕ ವಿಚಾರ. ಆಡಳಿತಕ್ಕೆ ಅನುಕೂಲವಾಗುವಂತೆ ಮಾಡಲಾಗುತ್ತದೆ. ಪ್ರತಿ ಸರ್ಕಾರಗಳು ಬಂದಾಗಲೂ ಬದಲಾಗುತ್ತದೆ ಎಂದು ಇದೇ ವೇಳೆ ಡಿಕೆ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ.50 ರಷ್ಟು ಹಣ ಬಿಡುಗಡೆಗೆ ತೀರ್ಮಾನ: ಡಿ.ಕೆ ಶಿವಕುಮಾರ್