ರಾಮನಗರ : ಚಿರತೆ ದಾಳಿಗೆ ಬಲಿಯಾಗಿದ್ದ ವೃದ್ಧೆ ಗಂಗಮ್ಮ ಮನೆಗೆ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಭೇಟಿ ನೀಡಿ ಕುಟುಂಬಸ್ಥರಿಗೆ ಪರಿಹಾರ ಧನ ಆದೇಶ ಪತ್ರ ವಿತರಣೆ ಮಾಡಿದರು. ಮಾಗಡಿ ತಾಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಮೇ 16ರಂದು ಮನೆ ಮುಂದೆ ಕುಳಿತಿದ್ದ ವೃದ್ಧೆ ಗಂಗಮ್ಮಳನ್ನು ಚಿರತೆ ಎಳೆದೊಯ್ದು ಕೊಂದು ಹಾಕಿತ್ತು. ಘಟನೆ ಹಿನ್ನೆಲೆ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿತ್ತು. ಇಂದು ಮೃತ ಗಂಗಮ್ಮಳ ಸೊಸೆ ಲಕ್ಷ್ಮಮ್ಮ, ಮೊಮ್ಮಗ ರವಿಶಂಕರ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ ಸಾಂತ್ವನ ಹೇಳಿ ಆದೇಶ ಪತ್ರ ವಿತರಿಸಿದರು.
ಚಿರತೆ ಕಳೆದ ಹದಿನೈದು ದಿನಗಳಲ್ಲಿ ಇಬ್ಬರನ್ನು ಬಲಿಪಡೆದಿದ್ದು, ಈ ಭಾಗದಲ್ಲಿ ವಾಸ ಮಾಡುವ ಜೀವಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಪ್ರತಿನಿತ್ಯ ಜೀವಭಯದಲ್ಲಿ ನಾವು ಜೀವನ ನಡೆಸುತ್ತಿದ್ದೇವೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಅಲ್ಲದೆ ಕೃಷಿ ಕೆಲಸಗಳನ್ನು ಸರಿಯಾಗಿ ಮಾಡಲು ಆಗುತ್ತಿಲ್ಲ. ನಮ್ಮ ಮುಖ್ಯ ಕಸುಬು ಕುರಿ, ಮೇಕೆಗಳನ್ನು ಸಾಕುವುದು ಆದರೆ ಚಿರತೆ ಭಯದಿಂದ ಸಾಕು ಪ್ರಾಣಿಗಳು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೂ ಕೂಡ ಮನೆಯಿಂದ ಹೊರಗಡೆ ಬರಲು ಆಗುತ್ತಿಲ್ಲ. ನಿಮಗೆ ಕೈ ಮುಗಿಯುತ್ತೇವೆ ಮನುಷ್ಯರ ರಕ್ತದ ರುಚಿ ನೋಡಿರುವ ಚಿರತೆ ಸೆರೆ ಹಿಡಿಯಿರಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮನ್ನು ಮುಗಿಸಿಬಿಡುತ್ತದೆ ಎಂದು ಸ್ಥಳೀಯ ಗ್ರಾಮಸ್ಥರು ಕೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ ಚಿರತೆ ದಾಳಿ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಯಾರೂ ಭಯ ಪಡಬೇಡಿ ಆದಷ್ಟು ಬೇಗ ಚಿರತೆಗಳನ್ನು ಸೆರೆ ಹಿಡಿಯಲಾಗುತ್ತದೆ ಎಂದು ಭರವಸೆ ನೀಡಿದರು.
ಹತ್ತು ದಿನದಲ್ಲಿ ಏಳು ಚಿರತೆ ಸೆರೆ
ಕಳೆದ ಹತ್ತು ದಿನಗಳಲ್ಲಿ 7 ಚಿರತೆಗಳನ್ನು ಸೆರೆಯಿಡಿಯಲಾಗಿದ್ದು, ಆದರೂ ಚಿರತೆಗಳ ಹಾವಳಿ ಕಡಿಮೆಯಾಗಿಲ್ಲ. ಸಂಜೆಯಾದರೆ ರಸ್ತೆಗೆ ಚಿರತೆಗಳು ಇಳಿಯುತ್ತವೆ. ಈ ಭಾಗದಲ್ಲಿ ಅರಣ್ಯಾಧಿಕಾರಿಗಳ ಕೊರತೆಯಿದೆ. ಅಧಿಕಾರಿಗಳು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ ಆದರೂ ಪ್ರಯೋಜನವಿಲ್ಲವೆಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.