ರಾಮನಗರ : ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಮೂರು ಅಂಶಗಳ ಸೂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸೂಚಿಸಿದ್ದು, ಅದರ ಪ್ರಕಾರ ಅತ್ಯಂತ ಕ್ರಮಬದ್ಧವಾಗಿ ಕೋವಿಡ್ ಸ್ಥಿತಿಯನ್ನು ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಜಿಲ್ಲೆಯ ಸಂಸದರು, ಶಾಸಕರು, ಎಲ್ಲ ಚುನಾಯಿತ ಪ್ರತಿನಿಧಿಗಳ, ಉನ್ನತ ಅಧಿಕಾರಿಗಳನ್ನು ಒಳಗೊಂಡ ವರ್ಚುಯಲ್ ಸಭೆಯ ಮೂಲಕ ಶುಕ್ರವಾರ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಡಿಸಿಎಂ, ಕ್ಷಿಪ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ಮಾಡುವುದು, ಕ್ಷಿಪ್ರವಾಗಿ ಫಲಿತಾಂಶ ನೀಡುವುದು ಹಾಗೂ ಪಾಸಿಟಿವ್ ಬಂದರೆ ಅಷ್ಟೇ ಕ್ಷಿಪ್ರವಾಗಿ ಚಿಕಿತ್ಸೆ ಆರಂಭಿಸುವ ಮೂರು ಅಂಶಗಳ ಸೂತ್ರವನ್ನು ಸೂಚಿಸಿದರು.
ಇದರ ಜತೆಗೆ, ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಡಿಸಿಎಂ ಸೂಚಿಸಿದರು. ಸರ್ಕಾರದ ಮಾರ್ಗಸೂಚಿಯಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪ್ಪದೇ ಲಸಿಕೆ ಕೊಡಬೇಕು. ಅದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜ್ವರ, ಶೀತ ಇದ್ದರೆ ಕೋವಿಡ್ ಪರೀಕ್ಷೆ ಮಾಡಿ:
ಯಾರಿಗೆ ಆಗಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳಿದ್ದರೆ ಕೂಡಲೇ ಅಂಥವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಅಥವಾ ಅಂಥವರು ಯಾರಾದರೂ ಇದ್ದರೆ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲ ಗಂಟೆಗಳಲ್ಲೇ ವರದಿ ಕೊಡುವುದರ ಜತೆಗೆ, ಯಾವುದೇ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಅಂತ ಗೊತ್ತಾದ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ಸಿಮ್ಟಮಿಕ್ ಅಥವಾ ಎ ಸಿಮ್ಟಮಿಕ್ ಅಂತ ವಿಂಗಡಣೆ ಮಾಡುವುದು ಬೇಡ. ಸೋಂಕು ಬಂದ ತಕ್ಷಣ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣ ಸ್ಥಿತಿಗೆ ಹೋಗುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಸಿಜನ್ ಮುಂತಾದವು ಬೇಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸೂತ್ರದಂತೆ ಕೆಲಸ ಮಾಡಿದರೆ ಮಾಡಿದರೆ ಸೋಂಕು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆಗ ಮಾತ್ರ ಯಾವುದೇ ಸಾವು - ನೋವು ಉಂಟಾಗುವುದಿಲ್ಲ. ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಮೊದಲಿನಿಂದಲೂ ರಾಮನಗರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಈಗಲೂ ಉತ್ತಮ ನಿರ್ವಹಣೆ ಇದೆ. ದಿನಕ್ಕೆ 1050ರಿಂದ 1100 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದ್ದೇನೆ. ಹಾಗೆಯೇ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ದಯಾನಂದ ಸಾಗರ್ ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್‌ನಲ್ಲಿ ಬೆಡ್‌ಗಳು ಸಾಕಷ್ಟು ಲಭ್ಯ ಇವೆ. ಸರ್ಕಾರ ಕೂಡ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಆಸ್ಪತ್ರೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ಸಾವು ಆದರೂ ತಪ್ಪದೇ ಶವ ಪರೀಕ್ಷೆ ಮಾಡಿ. ಅವರು ಯಾವ ಕಾರಣಕ್ಕೆ ಸತ್ತರು ಎಂಬ ಮಾಹಿತಿ ನಮ್ಮಲ್ಲಿರುತ್ತದೆ. ಜತೆಗೆ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಎಲ್ಲರೂ ತಪ್ಪದೇ ಭೇಟಿ ನೀಡಿ ಎಂದು ಡಿಸಿಎಂ ಸೂಚಿಸಿದರು.