ರಾಮನಗರ : ನಾಡಪ್ರಭು ಕೆಂಪೇಗೌಡರ ವೀರಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮವನ್ನು ಒಂದು ವರ್ಷದೊಳಗೆ ಸಮಗ್ರ ಅಭಿವೃದ್ಧಿಪಡಿಸಿ ಮುಂದಿನ ವರ್ಷದ ಜಯಂತಿಯನ್ನು ಇಲ್ಲಿಯೇ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ಡಿಸಿಎಂ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ನಾಡಪ್ರಭುಗಳ ವೀರಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು. ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ. ಹೀಗಾಗಿ, ಸಮಾಧಿ ಸ್ಥಳ, ಕೆಂಪಾಪುರ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು. ನಾಡಿನ ಮತ್ತು ದೇಶದ ಸಮಸ್ತ ಜನರು ಇಲ್ಲಿಗೆ ಭೇಟಿ ನೀಡುವಂತೆ ಆಗಬೇಕು. ಕೆಂಪೇಗೌಡರ ಕಾಲದ ವೈಭವವನ್ನು ಮರುಸೃಷ್ಠಿ ಮಾಡಿ ಇಡೀ ಗ್ರಾಮವನ್ನು ಐತಿಹಾಸಿಕವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಈಗಾಗಲೇ ಯೋಜನೆ ಜಾರಿ ಹಂತದಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯನ್ನು ಕ್ಷಿಪ್ರವಾಗಿ ಮುಗಿಸಲಾಗುವುದು. ಅದಕ್ಕಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಪಾರ್ಕ್‌ನಲ್ಲಿ ಕೆಂಪೇಗೌಡರ 108ಅಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಂಬರುವ ಫೆಬ್ರವರಿ-ಮಾರ್ಚ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೋವಿಡ್‌ನಿಂದ ವಿಳಂಬವಾಗಿದ್ದ ಕಾಮಗಾರಿ ಭರದಿಂದ ಸಾಗಿದೆ. ನೋಯ್ಡಾದಲ್ಲಿ ಅವರ ಪ್ರತಿಮೆ ಸಿದ್ಧವಾಗುತ್ತಿದೆ ಎಂದರು.
ಓದಿ: ನಾಡಪ್ರಭು ಆಶಯದಂತೆ ಬೆಂಗಳೂರು ಅಭಿವೃದ್ಧಿ : ಡಿಸಿಎಂ ಅಶ್ವತ್ಥ್ ನಾರಾಯಣ