ರಾಮನಗರ : ಡಿ.ಕೆ.ಶಿವಕುಮಾರ್ ಅವರಿಗೆ ದೇಹಕ್ಕೆ ಮಾತ್ರ ವಯಸ್ಸಾಗಿದೆ ಹೊರತು ಅವರಿಗೆ ರಾಜಕೀಯ ಪ್ರಭುದ್ಧತೆ ಇಲ್ಲ. ಅವರು ಏನು ಮಾಡ್ತಿದ್ದೀನಿ ಎನ್ನುವ ಅರಿವಿಲ್ಲದೆಯೇ ಮಾತನಾಡುತ್ತಿದ್ದಾರೆ. ಬಹುಶಃ ಅವರ ಅಕ್ರಮ ಸಂಪತ್ತು ಶನಿಯಾಗಿ ಕಾಡ್ತಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.
ಚನ್ನಪಟ್ಟಣ ಕಸಬಾ ಹೋಬಳಿ ಮತ್ತು ನಗರ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ನನ್ನ ಬಗ್ಗೆ ಕೆಟ್ಟ ಭಾಷೆ ಬಳಿಸಿ ಮಾತಾಡಿದ್ದಾರೆ. ಗಂಡಸುತನ ಎಂಬ ಪದ ಬಳಕೆ ಮಾಡಿದ್ದಾರೆ. ಇದೇ ಶಿವಕುಮಾರ್ ರಾಜಕೀಯಕ್ಕೆ ಹೆದರಿ ಕ್ಷೇತ್ರಕ್ಕೆ ಬರದೆ ಕದ್ದು ಕುಳಿತಿದ್ದಾಗ ನಾನು ದೈರ್ಯ ತುಂಬಿ ಬೆನ್ನಿಗೆ ನಿಂತು ಸಾತನೂರಿಗೆ ಕರೆತಂದು ನಿಲ್ಲಿಸಿದೆ. ನಾನು ಅವರನ್ನ ರಾಜಕೀಯವಾಗಿ ಬೆಳೆಸಿದೆ. ಅದಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ತಮ್ಮನಿಗೆ ಸಹಾಯ ಮಾಡುವಂತೆ ಕೈ-ಕಾಲು ಕಟ್ಟಿದ್ದರು. ಅದನ್ನೆಲ್ಲಾ ಅವರು ಮರೆತು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಅವರೇ ನೀರಾವರಿ ಸಚಿವರಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ, ಗಂಡಸುತನವಿದ್ದರೆ ಜಿಲ್ಲೆಯ ಜನರಿಗೆ ಕೆರೆ ತುಂಬಿಸಿ ತೋರಿಸಲಿ ಎಂದು ಮರುಸವಾಲು ಹಾಕಿದರು.
ಸಾರ್ವಜನಿಕ ಬದುಕಲ್ಲಿ ಅಕ್ರಮ ಸಂಪಾದನೆ ಮೂಲಕ ಸಾವಿರಾರು ಕೋಟಿ ಎಲ್ಲಿಂದ ಬಂತು? ಇದಕ್ಕೆಲ್ಲಾ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.