ರಾಮನಗರ/ಬೆಂಗಳೂರು: 'ನಮ್ಮ ನೀರು ನಮ್ಮ ಹಕ್ಕು' ಎಂಬ ಘೋಷವಾಕ್ಯದೊಂದಿಗೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ಕೆಂಗೇರಿ ಪ್ರವೇಶಿಸುವ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು ತಲುಪಿದೆ.
ಕಾಂಗ್ರೆಸ್ನ ಎರಡನೇ ಹಂತದ ಪಾದಯಾತ್ರೆಯ ಭಾನುವಾರ ಬಿಡದಿಯಿಂದ ಆರಂಭವಾಗಿದೆ. ಮೊದಲ ದಿನ ಪಾದಯಾತ್ರೆ ಮುಗಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರು ಬಾನಂದೂರಿನ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ಬೆಳಗ್ಗೆ ಆಂಜನೇಯ ಸ್ವಾಮಿ ಹಾಗೂ ಬಸವ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆದಿಚುಂಚನಗಿರಿ ರಾಮನಗರ ಶಾಖಾಮಠದ ಅನ್ನದಾನಿ ಸ್ವಾಮೀಜಿಗಳ ಆಶೀರ್ವಾದ ಪಡೆದು, ನಂತರ ನೇರವಾಗಿ ಬಿಡದಿಗೆ ಬಂದು ಪಾದಯಾತ್ರೆ ಆರಂಭಿಸಿದ್ದರು.
ಈ ಮಧ್ಯೆ ಬಿಡದಿ ಮಾಜಿ ಶಾಸಕ ಬಾಲಕೃಷ್ಣ ಅವರ ಜನ್ಮದಿನ ನಿಮಿತ್ತ ಬಾನಂದೂರಿನಲ್ಲಿ ಕೇಕ್ ಕತ್ತರಿಸಿ, ನಂತರ ಬಿಡದಿಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಬೃಹತ್ ಪುಷ್ಪಮಾಲೆ ಹಾಕಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತಿತರ ನಾಯಕರು ಜೊತೆಗಿದ್ದರು. ಎರಡನೇ ದಿನದ ಪಾದಯಾತ್ರೆಗೆ ತುಮಕೂರು, ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಹೆಜ್ಜೆ ಹಾಕಿದರು. ಈ ವೇಳೆ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು ಮೆರಗು ತಂದವು. ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಹಾಗೂ ಇತರ ಪೀಠಗಳ ಶ್ರೀಗಳು ಭಾಗವಹಿಸಿ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ: ಕ್ರಿಕೆಟ್ ಕಾಮೆಂಟರಿಗೆ ತೆರಳಿದ್ದ ಬಾಲಕ ನೇತ್ರಾವತಿ ಕಿನಾರೆಯಲ್ಲಿ ಶವವಾಗಿ ಪತ್ತೆ
ಪಾದಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಪ್ರಿಯಾಂಕ್ ಖರ್ಗೆ, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಸಲೀಂ ಅಹಮದ್, ಧ್ರುವನಾರಾಯಣ್, ಮುಖಂಡರಾದ ಬಾಲಕೃಷ್ಣ, ಮಧು ಬಂಗಾರಪ್ಪ, ರಂಗನಾಥ್, ವೆಂಕಟರಮಣಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಪಾದಯಾತ್ರೆಯು ಮಂಗಳವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದ್ದು, ಮಾರ್ಚ್ 3ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶದೊಂದಿಗೆ ಸಮಾಪ್ತಿಯಾಗಲಿದೆ.