ರಾಮನಗರ : ಎರಡನೇ ದಿನದ ಮೇಕೆದಾಟು ಪಾದಯಾತ್ರೆ ಬಿಡದಿ ಪಟ್ಟಣದಿಂದ ಸಿಲಿಕಾನ್ ಸಿಟಿ ಬೆಂಗಳೂರಿನತ್ತ ಸಾಗಲು ಸಜ್ಜಾಗಿದೆ. ಇಂದಿನ ಪಾದಯಾತ್ರೆಗೆ ಚಾಲನೆ ನೀಡಲು ಬಿಜಿಎಸ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಂಡಿದೆ.
ವೇದಿಕೆ ಕಾರ್ಯಕ್ರಮ ಮುಗಿದ ನಂತರ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಿ ಬಿ ಜಯಚಂದ್ರ, ಬಿ ಕೆ ಹರಿಪ್ರಸಾದ್, ಆಂಜನೇಯ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದಾರೆ.
ಇನ್ನೇನು ಕೆಲವೇ ನಿಮಿಷಗಳಲ್ಲಿ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭಗೊಳ್ಳಲಿದೆ. ಇಂದು ಕೂಡ ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆಯು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ಸಿಲಿಕಾನ್ ಸಿಟಿ ಪ್ರವೇಶ ಮಾಡಲಿದೆ. ಕೆಂಗೇರಿಯವರೆಗೆ ಮಾತ್ರ ಇಂದು ಸಾಗಲಿದೆ.

ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಹುಟ್ಟುಹಬ್ಬ ಆಚರಣೆ : ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಂಗಿದ್ದ ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮಸ್ಥಳ ಬಾನಂದೂರಿನಲ್ಲಿ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಜನ್ಮದಿನ ಆಚರಿಸಿ, ಕೇಕ್ ಕತ್ತರಿಸಿ ಶುಭ ಹಾರೈಸಿದರು. ರಾಮನಗರ ಶಾಖಾ ಮಠದ ಶ್ರೀ ಅನ್ನದಾನಿ ಸ್ವಾಮೀಜಿ, ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಹೆಜ್ಜೆ ಹಾಕಿದ ಸಿದ್ದರಾಮಯ್ಯ: ಮೇಕೆದಾಟು ಪಾದಯಾತ್ರೆಯ ಎರಡನೇ ದಿನವಾದ ಇಂದು ಸಿದ್ದರಾಮಯ್ಯ ಅವರು ಬಿಡದಿಯಿಂದ ಹೆಜ್ಜೆ ಹಾಕಿದ್ದಾರೆ. ಮಾಜಿ ಸಚಿವ ಜಯಚಂದ್ರ ಸೇರಿದಂತೆ ತುಮಕೂರು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು. ಕಾಲು ನೋವಿನಿಂದ ಬಳಲಿದ್ದ ಸಿದ್ದರಾಮಯ್ಯ ನೋವಿನಲ್ಲಿಯೇ ಮತ್ತೊಮ್ಮೆ ಪಾದಯಾತ್ರೆ ಆರಂಭಿಸಿದ್ದಾರೆ.