ರಾಮನಗರ: ಎಸ್ಡಿಪಿಐ ಮತ್ತು ಪಿಎಫ್ಐ ಇವೆರಡು ಉಗ್ರ ಸಂಘಟನೆಗಳಂತೆ ವರ್ತಿಸುತ್ತಿವೆ. ಇವುಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ. ಎಸ್. ವೀರಯ್ಯ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸಿಎಎ ಬೆಂಬಲಿಸಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪೌರತ್ವ ವಿರೋಧಿ ಹೋರಾಟದಲ್ಲಿ ಈ ಎರಡೂ ಸಂಘಟನೆಗಳು ಮುಂಚೂಣಿಯಲ್ಲಿವೆ. ದೇಶದಲ್ಲಿ ಮುಸ್ಲಿಂರು ನೆಮ್ಮದಿಯಾಗಿದ್ದಾರೆ. ಅದನ್ನು ಕೆಡಿಸುವ ಕೆಲಸ ನಡೆಯುತ್ತಿದೆ. ಸಂವಿಧಾನದ ವಿರೋಧಿಯಾಗಿ ಈ ಕಾಯ್ದೆ ಜಾರಿಗೆ ಬಂದಿಲ್ಲ. ರಾಜಕೀಯವಾಗಿ ಕಾಯ್ದೆಯನ್ನು ವಿರೋಧಿಸಲು ಕಾಂಗ್ರೆಸ್ ಕುಮ್ಮಕ್ಕಿನಿಂದ ಎರಡೂ ಸಂಘಟನೆಗಳು ಮುಸ್ಲಿಂರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಈ ಎರಡು ಸಂಘಟನೆಗಳು ಉಗ್ರವಾದದ ಸಂಘಟನೆಗಳು ಎಂಬುದು ಹಲವು ಬಾರಿ ಸಾಬೀತಾಗಿದೆ. ಸಿಎಎ ಕಾಯ್ದೆ 1956 ರಲ್ಲೇ ಬಂದಿದ್ದು, ಅದನ್ನು ಹೊಸದಾಗಿ ಜಾರಿಗೆ ತಿಂದಿಲ್ಲ. ಈಗಾಗಲೇ ಕೆಲವು ಬಾರಿ ತಿದ್ದುಪಡಿ ಆಗಿದೆ. 2011 ರಲ್ಲಿ ಕಾಂಗ್ರೆಸ್ ಪಕ್ಷ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನ, ಅಫ್ಘಾನ್ ಮತ್ತು ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗ್ತಿದೆ. ಈ ಕಾಯ್ದೆಯಿಂದ ಭಾರತದಲ್ಲೇ ಹುಟ್ಟಿ ಬೆಳೆದ ಯಾವೊಬ್ಬ ನಾಗರಿಕರಿಗೂ ತೊಂದರೆ ಇಲ್ಲ. ಸುಖಾಸುಮ್ಮನೆ ವಿರೋಧ ಮತ್ತು ಅಪಪ್ರಚಾರ ಮಾಡಲಾಗುತ್ತಿದೆ ಎಂದು ವೀರಯ್ಯ ಗುಡುಗಿದರು.