ರಾಮನಗರ: ಗಾರ್ಮೆಂಟ್ ಫ್ಯಾಕ್ಟರಿಗಳನ್ನು ತೆರೆಯುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದು ಶೀಘ್ರ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.
ನಗರದ ವಿವಿಧೆಡೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಬಗ್ಗೆ ಕುಮಾರಸ್ವಾಮಿರವರಿಗೆ ಇರುವ ವಿಶೇಷ ಕಾಳಜಿ ಇದೆ, ಅದರ ಹಿನ್ನೆಲೆ ಕೋಟ್ಯಾಂತರ ಅನುದಾನ ಬಿಡುಗಡೆ ಮಾಡಿದ್ದಾರೆ. ನಿರುದ್ಯೋಗ ನಿವಾರಣೆಗಾಗಿ ಕಾರ್ಖಾನೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಅದಕ್ಕಾಗಿ ಹಲವು ಗಾರ್ಮೆಂಟ್ಸ್ ಕಾರ್ಖಾನೆ ಮಾಲೀಕರ ಜೊತೆಗೆ ಈಗಾಗಲೇ ಮಾತನಾಡುತ್ತಿದ್ದೇನೆ ಎಂದರು.
ಅಲ್ಪ ಸಂಖ್ಯಾತ ಇಲಾಖೆ ವತಿಯಿಂದ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಅದರಲ್ಲಿ ಬೀಡಿ ಕಾರ್ಮಿಕರ ಕಾಲೋನಿ ಅಭಿವೃದ್ಧಿಗೆ ಒಂದು ಕೋಟಿ ನೀಡಲಾಗಿದೆ. ಇದಷ್ಟೇ ಅಲ್ಲದೆ ವಾರ್ಡ್ಗಳ ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು, ಆಗ ರೈತ ಆರ್ಥಿಕವಾಗಿ ಸಬಲನಾಗುತ್ತಾನೆ, ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿಯವರ ಪ್ರಯತ್ನ ನಿರಂತರವಾಗಿದೆ. ಪಕ್ಕದ ಆಂಧ್ರ ಪ್ರದೇಶದ ರೈತರ ಸ್ವಾವಲಂಭಿ ಬದುಕು, ವಿದೇಶದ ಇಸ್ರೇಲ್ನಲ್ಲಿ ಕೃಷಿ ಪದ್ಧತಿ ಬಗ್ಗೆ ಸಿಎಂ ಅಧ್ಯಯನ ಮಾಡಿದ್ದಾರೆ. ಈ ಮೂಲಕ ಕೃಷಿ ಚಟುವಟಿಕೆ ಉತ್ತೇಜನಕ್ಕೆ ಒತ್ತು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ನೀರಿನ ಸಮಸ್ಯೆ ಇರೋದ್ರಿಂದ ಡ್ರಿಪ್ ಇರಿಗೇಷನ್ಗೆ ಆದ್ಯತೆ ನೀಡುವ ಚಿಂತನೆ ಮಾಡ್ತಿದ್ದಾರೆ. ಹೀಗಾಗಿ ನೀರಾವರಿ ಚಿಂತನೆ ಕಷ್ಟ ಆಗೋಲ್ಲ ಎಂಬ ವಿಶ್ವಾಸವಿದೆ ಎಂದರು.
ಆರೋಗ್ಯ ವಿವಿಗೆ ಚಾಲನೆ:
ಕುಮಾರಸ್ವಾಮಿ ಅವರ ಕನಸಿನ ಕೂಸಾದ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಕಾಮಗಾರಿಗೆ ಕೂಡಲೇ ಚಾಲನೆ ದೊರೆಯಲಿದ್ದು, ಅದಕ್ಕಾಗಿ ಹೆಚ್ಚು ಗಮನ ಹರಿಸಲಾಗಿದೆ. ಹಾಗೆಯೇ ಉಚಿತ ನಿವೇಶನಕ್ಕಾಗಿ ಜಾಗ ಗುರುತಿಸಿ ಆಗಿದೆ. 3000 ನಿವೇಶನ, 5000 ಮನೆಗಳ ನಿರ್ಮಾಣ ಮಾಡಿ ಬಡವರಿಗೆ ನೀಡಲು ಸಿದ್ಧತೆ ನಡೆದಿದೆ ಎಂದರು.