ರಾಮನಗರ: ಕೈಗಾರಿಕಾ ಕ್ಲಸ್ಟರ್‌ಗಳಿಂದ ಹೆಚ್ಚಿನ ಕೈಗಾರಿಕೆಗಳು ರಚನೆಯಾಗಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ದೊರೆಯುತ್ತದೆ. ಇದರಿಂದ ಜಿಲ್ಲೆಯು ಸಹ ಅಭಿವೃದ್ಧಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶಟ್ಟರ್ ತಿಳಿಸಿದ್ದಾರೆ.
ಇಂದು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಿಂಟ್ ಟೆಕ್ ಪಾರ್ಕ್ ಕ್ಲಸ್ಟರ್ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು. ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಸ್ಥಾಪನೆ ಪ್ರಾರಂಭವಾಗಿದ್ದು, 400 ಎಕರೆ ಪ್ರದೇಶದಲ್ಲಿ ಯುಎಸ್ ಹೂಡಿಕೆದಾರರು 5,000 ಕೋಟಿ ರೂ. ಹೂಡಿಕೆ ಮಾಡಲಿದ್ದು, 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ಕೆಲಸಕ್ಕಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳುತ್ತಿದ್ದ ಜನರು ಸ್ಥಳೀಯವಾಗಿ ಉದ್ಯೋಗ ಕಂಡುಕೊಳ್ಳುವಂತಾಗಿದೆ. ಹುಬ್ಬಳಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ. ಇಲ್ಲೂ ಕೂಡ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ರಾಜ್ಯದ ವಿವಿಧ ಭಾಗದಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳು ಪ್ರಾರಂಭವಾಗುತ್ತಿದ್ದು, ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮೊದಲ ಕಾರ್ಯಗತ ಪ್ರಿಂಟ್ ಟೆಕ್ ಕ್ಲಸ್ಟರ್ ಪ್ರಾರಂಭವಾಗಿದೆ. ಆಧುನಿಕ ಪ್ರಿಂಟಿಂಗ್ ಯಂತ್ರಗಳನ್ನು ಬಳಸಿ ಇಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು ಕೈಗಾರಿಕೆಗಳು ಉದ್ದೇಶಿಸಿವೆ. ಪ್ರಿಂಟಿಂಗ್ ಎಂದ ಕೂಡಲೇ ಹಿಂದೆ ತಮಿಳುನಾಡು ನೆನಪಾಗುತ್ತಿತ್ತು. ಇನ್ನು ಮುಂದೆ ಪ್ರಿಂಟಿಂಗ್ ಎಂದ ಕೂಡಲೇ ಇಡೀ ರಾಜ್ಯಕ್ಕೆ ಹಾರೋಹಳ್ಳಿ ನೆನಪಿಗೆ ಬರುವ ರೀತಿ ಬೆಳೆಯಬೇಕು ಎಂದರು.
ಕೋವಿಡ್ ಸಂದರ್ಭದಲ್ಲೂ ಕೈಗಾರಿಕೆಗಳು ಪ್ರಾರಂಭ
ಯಾದಗಿರಿ ಜಿಲ್ಲೆಯಲ್ಲಿ 4,000 ಹೆಕ್ಟೇರ್ ಭೂ ಸ್ವಾಧೀನ ಮಾಡಿ ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಮೂಲಭೂತ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿತ್ತು. ಹೂಡಿಕೆದಾರರೊಂದಿಗೆ ಸಭೆ ನಡೆದ ಸಂದರ್ಭದಲ್ಲಿ ಹೈದರಾಬಾದ್‌ಗೆ ಹತ್ತಿರವಾದ ಯಾದಗಿರಿ, ರಾಯಚೂರಿನಲ್ಲಿ ಫಾರ್ಮಾಸುಟಿಕಲ್ ಕಂಪನಿಗಳನ್ನು ಪ್ರಾರಂಭಿಸುವಂತೆ ಚರ್ಚಿಸಲಾಯಿತು. ಕೋವಿಡ್‌ನಂತಹ ಸಂದರ್ಭದಲ್ಲೂ ಅಂದಾಜು 70 ಫಾರ್ಮಾಸುಟಿಕಲ್ ಕಂಪನಿಗಳು ಇಲ್ಲಿ ಪ್ರಾರಂಭವಾಗಿವೆ ಎಂದರು.
ಬೆಂಗಳೂರಿನಲ್ಲಿ ಹೆಚ್ಚಿನ ಕೈಗಾರಿಕೆಗಳಿದ್ದು, ನಗರ ಅಭಿವೃದ್ಧಿಗೊಂಡಿದೆ. 2 ಟೈಯರ್ ಮತ್ತು 3 ಟೈಯರ್ ನಗರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಹೊಸ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆ ನಗರಗಳಲ್ಲೂ ಕೈಗಾರಿಕೆಗಳು ಪ್ರಾರಂಭವಾಗುತ್ತಿವೆ. ಚಾಮರಾಜನಗರ ಜಿಲ್ಲೆಗೆ ಕೇರಳ, ತಮಿಳನಾಡಿಗೆ ಹತ್ತಿರವಾಗಿದ್ದು, ಇಲ್ಲಿ ಕೈಗಾರಿಕೆಗಳನ್ನು ಸೆಳೆಯಲು ರೋಡ್ ಶೋ ನಡೆಸಲು ಚಿಂತಿಸಲಾಗುತ್ತಿದೆ ಎಂದರು.
ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್‌ನ ಅಧ್ಯಕ್ಷ ಜನಾರ್ಧನ ಮಾತನಾಡಿ, ಮುದ್ರಣ ಉದ್ಯಮದಲ್ಲಿ ಭಾರತವು 4ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 12,000ಕ್ಕೂ ಹೆಚ್ಚು ಉದ್ದಿಮೆದಾರರಿದ್ದಾರೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 57 ಎಕರೆ ಪ್ರದೇಶದಲ್ಲಿ ಪ್ರಿಂಟೆಕ್ ಪಾರ್ಕ್ ಪ್ರಾರಂಭಿಸಲಾಗಿದೆ. ಇಲ್ಲಿನ ಕೆಲವು ಮೂಲಭೂತ ಅಭಿವೃದ್ಧಿ ಕೆಲಸಕ್ಕಾಗಿ 2 ಕೋಟಿ ರೂ. ಸರ್ಕಾರದಿಂದ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕೆಪಿಸಿಸಿಗೆ ಮತ್ತಿಬ್ಬರು ಕಾರ್ಯಾಧ್ಯಕ್ಷರ ನೇಮಕ