ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಅಶ್ಚತ್ಥ ನಾರಾಯಣ, ಡಿ.ಕೆ ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ನಡೆದಿದೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ವೇದಿಕೆಯಲ್ಲಿ ಡಿ.ಕೆ ಸುರೇಶ್ ಬೆಂಬಲಿಗರು ಮುಖ್ಯಮಂತ್ರಿ ಎದುರೇ 'ಡಿ.ಕೆ,ಡಿ.ಕೆ' ಅಂತ ಘೋಷಣೆ ಕೂಗಿದ್ದಲ್ಲದೇ ಸಚಿವ ಅಶ್ವಥ್ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದರು.
ಸಚಿವ ಅಶ್ವತ್ಥ ನಾರಾಯಣ್ ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಯಾರು ಮಾಡಿಲ್ಲ. ಬಿಜೆಪಿ ಪಕ್ಷ ಮಾತ್ರ ಮಾಡಿರುವುದು ಎಂದು ಭಾಷಣ ಮಾಡ್ತಿದ್ದರು. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನಾವು ಆರಂಭಿಸಿದ ಕಾಮಗಾರಿ ನಮ್ಮ ಅವಧಿಯಲ್ಲೆ ಮುಗಿಸುತ್ತೇವೆ. ಇತರೆ ಪಕ್ಷದ ಹಾಗೆ ವರ್ಷಾನುಗಟ್ಟಲೆ ತೆಗೆದುಕೊಳ್ಳುವುದಿಲ್ಲ. ಯಾರೋ ಒಂದಿಬ್ಬರು ಕೂಡಿಕೊಂಡು ಬಂದು ಕಾರ್ಯ ಕ್ರಮಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದು ಗಡಸು ಧ್ವನಿಯಲ್ಲಿ ಅಶ್ವಥ್ ನಾರಾಯಣ ಮಾತನಾಡುತ್ತಿರುವಾಗಲೇ ಮೈಕ್ ಬಳಿಗೆ ಡಿಕೆ ಸುರೇಶ್ ಬಂದು ಹರಿಹಾಯ್ದರು. ಈ ವೇಳೆ ಪರಿಸ್ಥಿತಿ ಕೈ-ಕೈ ಮಿಲಾಯಿಸುವ ಹಂತ ಕೂಡ ತಲುಪಿತು.
ಆಗ ಪೊಲೀಸರು ಮತ್ತು ಕಾರ್ಯಕರ್ತರು ಮಧ್ಯೆ ಬಂದರು. ಡಿ.ಕೆ.ಸುರೇಶ್ಗೆ ಎಂ.ಎಲ್.ಸಿ. ರವಿ ಸಾಥ್ ನೀಡಿದರು. ಬಳಿಕ ಸಿಎಂ ಮಧ್ಯಪ್ರವೇಶಿಸಿ ಇಬ್ಬರ ಮಧ್ಯೆ ನಡೆದ ಗಲಾಟೆಯನ್ನು ತಿಳಿಗೊಳಿಸಿದರು. ಒಂದು ಹಂತಕ್ಕೆ ಸ್ವತಃ ಸಂಸದರು ವೇದಿಯಲ್ಲೆ ಕುಳಿತು ಸಚಿವರ ವಿರುದ್ಧ ಸಿಎಂ ಎದುರೇ ಪ್ರತಿಭಟನೆ ಮಾಡಿದರು.
ಗಲಾಟೆ ನಡುವೆ ಸಿಎಂ ಮಾತನಾಡಿ, ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ದಯವಿಟ್ಟು ಗಲಾಟೆ ಮಾಡಬೇಡಿ. ಇದೇ ಪ್ರಥಮ ಭಾರಿಗೆ ಜಿಲ್ಲೆಗೆ ಬಂದಿದ್ದೇನೆ. ಈ ಜಿಲ್ಲೆಯಲ್ಲಿ ರಾಜಕೀಯ ಮಾಡಲು ಬಂದಿಲ್ಲ. ರಾಜಕೀಯ ಮಾಡುವ ಸಮಯ ಬಂದಾಗ ರಾಜಕೀಯ ಮಾಡೋಣ. ಇಲ್ಲಿ ಅಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ಕಾಳಜಿ ವಹಿಸೋಣ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ :
ಬಳಿಕ ಸಚಿವ ಅಶ್ವಥ್ ನಾರಾಯಣ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಇರುವ ವೇದಿಕೆಯಲ್ಲೇ ಡಿಕೆ ಸುರೇಶ್ ವಿರುದ್ಧ ಏಕವಚನದಲ್ಲಿ ಮಾತನಾಡಿದ ಆರೋಪದ ಮೇರೆಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಅಶ್ವಥ್ ನಾರಾಯಣ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಚನ್ನಪಟ್ಟಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.